ಪ್ರೀತಿ ಮಾಯೆ ಹುಷಾರು ಅಂತಾರೆ..! ಪ್ರೀತಿಯಲ್ಲಿ ಸಂತಸಮಯ ಜೀವನ ನಡೆಸುವವರ ಗುಂಪು ಒಂದೆಡೆಯಾದರೆ ಲವ್ ಹೆಸರಲ್ಲಿ ಹುಚ್ಚಾಟ ಮೆರೆಯುವವರ ಬಳಗವೆ ಒಂದಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ಮಂಗಳೂರು ಹೊರ ವಲಯದ ಅಡ್ಯಾರು ಎಂಬಲ್ಲಿ ಯುವತಿ ತನ್ನ ಪ್ರೀತಿಗೆ ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಟವರ್ ಏರಿ ಹುಚ್ಚಾಟ ಮೆರೆದಿದ್ದಾನೆ.
ಮೊಬೈಲ್ ಟವರ್ ಏರಿದ ಯುವಕ ನಾನು ಸಾಯುತ್ತೇನೆ ಎಂದು ಪಟ್ಟು ಹಿಡಿದಿದ್ದ. ಇದರಿಂದ ತಲೆ ಕೆಡಿಸಿಕೊಂಡ ಗ್ರಾಮಸ್ಥರು ಸ್ಥಳೀಯ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಆಗ್ನಿ ಶಾಮಕ ದಳ ಯುವಕನನ್ನು ಟವರ್ನಿಂದ ಕೆಳಗಿಳಿಸಲು ನಾನಾ ಸರ್ಕಸ್ ಮಾಡಿದೆ.
ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ನಾನಾ ಪ್ರಯತ್ನಗಳ ನಡುವೆಯೂ ಯುವಕ ಮಾತ್ರ ಟವರ್ನಿಂದ ಕೆಳಗಿಳಿದಿಲ್ಲ. ಕೊನೆಗೆ ಪ್ರೀತಿಸಿದ ಹುಡುಗಿಯೇ ಬಂದು ಕೆಳಗಿಳಿ ಎಂದು ಹೇಳಿದ ಮೇಲೆ ಈ ಭೂಪ ಟವರ್ನಿಂದ ಕೆಳಗಿಳಿದಿದ್ದಾನೆ.
ಅಸಲಿಗೆ ಈತ ಯುವತಿಗೆ ಪ್ರೀತಿಸು ಎಂದು ಪದೇ ಪದೇ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಯುವತಿ ಯುವಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದಳು. ದೂರು ನೀಡಿದ್ದರಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಈತ ಟವರ್ ಏರಿದ್ದ ಎನ್ನಲಾಗಿದೆ. ಯುವತಿ ಟವರ್ ಇದ್ದ ಸ್ಥಳಕ್ಕೆ ಬಂದು ನಾನು ದೂರು ವಾಪಸ್ ತೆಗೆದುಕೊಳ್ಳುವೆ ಎಂದ ಬಳಿಕ ಯುವಕ ಟವರ್ನಿಂದ ಕೆಳಗಿಳಿದಿದ್ದಾನೆ.