ಕೊಲೆ ಪ್ರಕರಣ ಒಂದರಲ್ಲಿ ಆರೋಪ ಸಾಬೀತಾಗಿ ಹತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ಹೈಕೋರ್ಟ್, ಆತ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾಗಲು ಅವಕಾಶ ಕಲ್ಪಿಸಿ 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣದ ವಿವರ: 2015 ರಲ್ಲಿ ಸ್ಥಿರಾಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಕೋಲಾರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆತ ಮೇಲ್ಮನವಿ ಸಲ್ಲಿಸಿದ್ದು ಹೈಕೋರ್ಟ್ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ನಿಗದಿಪಡಿಸಿತ್ತು. ಆತ ಆರು ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಆದರೆ ಈತ ಈ ಕೃತ್ಯವೆಸಗುವ ಮೊದಲು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಈ ಪ್ರೀತಿಗೆ ಪೋಷಕರ ಸಮ್ಮತಿಯೂ ಇತ್ತು ಎನ್ನಲಾಗಿದೆ. ಹೀಗಾಗಿ ಯುವತಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನಾನು ಆತನನ್ನು ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಆತನನ್ನೇ ಮದುವೆಯಾಗಬಯಸಿದ್ದು ಜೈಲಿನಲ್ಲಿರುವ ಕೈದಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.
ಇದನ್ನು ಮನ್ನಿಸಿರುವ ನ್ಯಾಯಾಲಯ 15 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದು, ಪೆರೋಲ್ ಅವಧಿಯಲ್ಲಿ ಆತ ಯಾವುದೇ ಅಪರಾಧ ಕೃತ್ಯವೆಸಗದಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಜೈಲು ಅಧಿಕಾರಿಗಳಿಗೆ ಸೂಚಿಸಿದೆ.