ಯುವಕನ ಪ್ರೀತಿಯಲ್ಲಿ ಬಿದ್ದಿದ್ದ ಅಪ್ರಾಪ್ತೆಯೊಬ್ಬಳು ಮನೆಯವರು ವಿರೋಧಿಸಿದರು ಎಂಬ ಕಾರಣಕ್ಕೆ ವಿಷ ಸೇವಿಸಿ ಸಾವನ್ನಪ್ಪಿದ್ದು, ಬಳಿಕ ಆಕೆಯ ಮನೆಯವರು ಯುವಕನನ್ನು ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳ ಕವಟಗಿ ಗ್ರಾಮದಲ್ಲಿ ನಡೆದಿದೆ.
ಸೆಪ್ಟೆಂಬರ್ 22ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳ್ಳ ಕವಟಗಿಯ ಅಪ್ರಾಪ್ತೆಗೆ ಘೊಣಸಗಿಯ ಮಲ್ಲು ಜಮಖಂಡಿ ಎಂಬಾತನೊಂದಿಗೆ ಪ್ರೇಮಾಂಕರವಾಗಿತ್ತು. ಇವರಿಬ್ಬರೂ ಒಂದೇ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು.
ಇದು ಅಪ್ರಾಪ್ತೆಯ ತಂದೆ ಗುರಪ್ಪನಿಗೆ ತಿಳಿದು ಬಂದಿದ್ದು, ಮಗಳಿಗೆ ಬುದ್ಧಿ ಹೇಳಿದ್ದರು. ಇದರ ಮಧ್ಯೆ ಅಪ್ರಾಪ್ತೆ ಸೆಪ್ಟೆಂಬರ್ 22ರಂದು ಕರೆ ಮಾಡಿ ಮಲ್ಲು ಜಮಖಂಡಿಯನ್ನು ತನ್ನ ಮನೆಗೆ ಕರೆಯಿಸಿಕೊಂಡಿದ್ದಾಳೆ. ಇಬ್ಬರು ಏಕಾಂತದಲ್ಲಿದ್ದಾಗ ಗುರಪ್ಪನ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಈ ವೇಳೆ ಅಪ್ರಾಪ್ತೆ ವಿಷ ಸೇವಿಸಿದ್ದು ಸಾವನ್ನಪ್ಪಿದ್ದಾಳೆ. ಇದರಿಂದ ಆಕ್ರೋಶಗೊಂಡ ಗುರಪ್ಪ ತನ್ನ ಅಳಿಯ ಅಜಿತ್ ಎಂಬಾತನೊಂದಿಗೆ ಸೇರಿಕೊಂಡು ಮಲ್ಲು ಜಮಖಂಡಿಗೆ ಬಲವಂತವಾಗಿ ವಿಷ ಕುಡಿಸಿ ಸಾಯಿಸಿದ್ದಾನೆ.
ಬಳಿಕ ಇಬ್ಬರ ಶವಗಳನ್ನು ಪ್ರತ್ಯೇಕ ಚೀಲಗಳಲ್ಲಿ ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದು, ಮಲ್ಲು ಜಮಖಂಡಿಯ ಶವ ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಅಪ್ರಾಪ್ತೆಯ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.