ಕೆಲವೊಂದು ಸಂಬಂಧಗಳೇ ಹಾಗೆ. ಅವುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಲ್ಲೂ ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಬಂಧವಂತೂ ಊಹೆಗೆ ನಿಲುಕದ್ದು. ಈ ಮಾತಿಗೆ ಅತ್ಯದ್ಭುತ ಉದಾಹರಣೆ ಎಂಬಂತಹ ಘಟನೆಯೊಂದು ಓಡಿಶಾದ ಗಜಪತಿ ಜಿಲ್ಲೆಯಲ್ಲಿ ಪರಲಕೆಮುಂಡಿ ಎಂಬಲ್ಲಿ ನಡೆದಿದೆ. 16 ವರ್ಷಗಳ ಕಾಲ ಸಾಕಿದ್ದ ಪ್ರೀತಿಯ ಸಾಕು ಶ್ವಾನ ಅಂಜಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಲ್ಲಿಯ ಕುಟುಂಬವೊಂದು ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆಯನ್ನು ನೆರವೇರಿಸಿದೆ.
ಅಂಜಲಿಯ ಅಂತಿಮ ಸಂಸ್ಕಾರಕ್ಕೆಂದು ಶವಸಂಸ್ಕಾರದ ವಾಹನವನ್ನು ಹೂವಿನಿಂದ ಸಿಂಗರಿಸಲಾಗಿತ್ತು. ಅಂಜಲಿಯ ಅಂತಿಮ ಮೆರವಣಿಗೆಯ ಸಂದರ್ಭದಲ್ಲಿ ಸಂಗೀತ ವಾದ್ಯಗಳು, ಡಿಜೆ ಹಾಗೂ ಪಟಾಕಿಯ ಸದ್ದು ಪ್ರತಿಧ್ವನಿಸಿದೆ.
ಸ್ಮಶಾನದ ಕಡೆಗೆ ತೆರಳುವಷ್ಟರಲ್ಲಿ ಶ್ವಾನದ ಮಾಲೀಕರಾದ ತನು ಗೌಡ ಎಂಬವರ ದುಃಖದ ಕಟ್ಟೆ ಒಡೆದು ಹೋಗಿತ್ತು. ಅಂಜಲಿ ಸಾವಿನ ಬಳಿಕ ಈ ಕುಟುಂಬಕ್ಕೆ ದುಃಖದ ಕಾರ್ಮೋಡ ಆವರಿಸಿದೆ. ಇಡೀ ಕುಟುಂಬವು ಅಂಜಲಿಯನ್ನು ಮುದ್ದಾಗಿ ಸಾಕಿದ್ದರು.
ಬಡಕುಟುಂಬದಲ್ಲಿ ಜನಿಸಿದ್ದ ತನು ಗೌಡ ಜೀವನದಲ್ಲಿ ಈ ಶ್ವಾನವು ಬಂದ ಬಳಿಕ ಅವರ ಆರ್ಥಿಕ ಸ್ಥಿತಿ ಸುಧಾರಿಸಿತ್ತು. ಹೀಗಾಗಿ ಅವರು ಅಂಜಲಿಯನ್ನು ತಮ್ಮ ಪಾಲಿನ ಅದೃಷ್ಟ ದೇವತೆಯೆಂದೇ ನಂಬಿದ್ದರು. ಹೀಗಾಗಿ ಅಂಜಲಿ ಸಾವು ಈ ಕುಟುಂಬಕ್ಕೆ ಮನೆಯ ಸದಸ್ಯನನ್ನೇ ಕಳೆದುಕೊಂಡಂತಾಗಿದೆ.