ಅಪರೂಪಕ್ಕೆ ಭೇಟಿಯಾದಾಗ, ಬಹಳ ದಿನಗಳ ವಿರಹದ ನಂತರ ಸಿಕ್ಕಾಗ ಪ್ರೀತಿಯಿಂದ ಅಪ್ಪಿಕೊಳ್ಳೋದು ಸಾಮಾನ್ಯ. ಇದನ್ನು ಸಿನೆಮಾ ಸ್ಟೈಲ್ನಲ್ಲಿ ಜಾದೂ ಕಿ ಜಪ್ಪಿ ಅಂತಾ ಕರೆಯುತ್ತೇವೆ. ಯಾರನ್ನಾದರೂ ಪ್ರೀತಿಯಿಂದ ತಬ್ಬಿಕೊಂಡರೆ ಹೃದಯ, ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಆದ್ರೆ ಇಂಥದ್ದೇ ಅಪ್ಪುಗೆಯೊಂದು ಮಹಿಳೆಯ ಪಕ್ಕೆಲುಬಿಗೇ ಕುತ್ತು ತಂದಿದೆ.
ಚೀನಾದಲ್ಲಿ ನಡೆದಿರುವ ಘಟನೆ ಇದು. ಮಹಿಳೆಯೊಬ್ಬಳು ತನ್ನ ಸಹೋದ್ಯೋಗಿ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ಸಹೋದ್ಯೋಗಿ ತುಂಬಾ ಬಿಗಿಯಾಗಿ ತಬ್ಬಿಕೊಂಡಿದ್ದರಿಂದ ಮಹಿಳೆಯ ಎದೆಯ ಭಾಗದಲ್ಲಿರುವ ಮೂರು ಪಕ್ಕೆಲುಬುಗಳು ಮುರಿದು ಹೋಗಿವೆ. ಮೂಳೆ ಮುರಿತ ಸರಿಪಡಿಸಲು ಪಡೆದಿರೋ ಚಿಕಿತ್ಸಾ ವೆಚ್ಚವನ್ನು ಆತ ಭರಿಸಬೇಕೆಂದು ಮಹಿಳೆ ಒತ್ತಾಯಿಸಿದ್ದಾಳೆ. ಚೀನಾದ ಹುನಾನ್ ಪ್ರಾಂತ್ಯದ ಯುಯಾಂಗ್ ನಗರದ ಮಹಿಳೆ ಕಚೇರಿಯಲ್ಲಿ ಸಹೋದ್ಯೋಗಿ ಜೊತೆ ಹರಟೆ ಹೊಡೆಯುತ್ತಿದ್ಲು.
ಅಲ್ಲಿಗೆ ಬಂದ ಪುರುಷ ಸಹೋದ್ಯೋಗಿಯೊಬ್ಬ ಬಲವಾಗಿ ತಬ್ಬಿಕೊಂಡಿದ್ದಾನೆ. ಆಲಿಂಗನ ಹೊಡೆತಕ್ಕೆ ಮಹಿಳೆ ನೋವಿನಿಂದ ನರಳಿದ್ದಾಳೆ. ಆಕೆಗೆ ಎದೆನೋವು ಶುರುವಾಗಿತ್ತು. ವೈದ್ಯರ ಬಳಿ ಹೋಗುವ ಬದಲು ಎದೆಗೆ ಬಿಸಿ ಎಣ್ಣೆ ಹಚ್ಚಿ ನಿದ್ದೆಗೆ ಜಾರಿದ್ದಾಳೆ. ಐದು ದಿನಗಳಾದ್ರೂ ಎದೆನೋವು ಕಡಿಮೆಯಾಗದೇ ಇದ್ದಿದ್ರಿಂದ ಆಸ್ಪತ್ರೆಗೆ ಹೋಗಿದ್ದಾಳೆ. ಎಕ್ಸ್-ರೇ ಹಾಗೂ ಸ್ಕ್ಯಾನಿಂಗ್ನಲ್ಲಿ ಮಹಿಳೆ ಮೂರು ಪಕ್ಕೆಲುಬುಗಳು ಮುರಿದಿರುವುದು ಗೋಚರಿಸಿದೆ. ಶುಶ್ರೂಷೆ ಮತ್ತು ವೈದ್ಯಕೀಯ ವೆಚ್ಚ ಕೊಡುವಂತೆ ಆ ಸಹೋದ್ಯೋಗಿಯನ್ನು ಕೇಳಿದ್ರೂ ಆತ ಒಪ್ಪಲೇ ಇಲ್ಲ.
ತಾನೇ ಪಕ್ಕೆಲುಬು ಮುರಿದಿದ್ದೇನೆ ಎಂಬುದಕ್ಕೆ ನಿನ್ನ ಬಳಿ ಸಾಕ್ಷ್ಯವಿಲ್ಲ ಎಂದಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಸಹೋದ್ಯೋಗಿಯ ಮೇಲೆ ಮೊಕದ್ದಮೆ ಹೂಡಿದ್ದಾಳೆ. ಕೇಸ್ನ ತೀರ್ಪು ಹೊರಬಿದ್ದಿದ್ದು ಪಕ್ಕೆಲುಬು ಮುರಿದ ಸಹೋದ್ಯೋಗಿ ಆಕೆಗೆ 1.16 ಲಕ್ಷ ರೂಪಾಯಿ ಕೊಡಬೇಕೆಂದು ನ್ಯಾಯಾಲಯ ಆದೇಶಿಸಿದೆ.