
ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಾಯಕ-ನಾಯಕಿಯರನ್ನು ಅಸಹಜವಾಗಿ ತೋರಿಸುವುದು ಸಾಮಾನ್ಯ. ನಿಜ ಜೀವನದಲ್ಲಿ ಆಗದ ಸಾಹಸಮಯ ದೃಶ್ಯಗಳನ್ನು ಅವರು ಮಾಡುತ್ತಾರೆ, ಇದು ರೀಲ್ ಎಂದು ತಿಳಿದಿದ್ದರೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, ಇದಕ್ಕಾಗಿಯೇ ನಿರ್ದೇಶಕರು ಕೆಲವೊಮ್ಮೆ ವಿಪರೀತ ಎನಿಸುವ ಅಸಹಜ ದೃಶ್ಯಗಳನ್ನು ತುರುಕುವುದು ಇದೆ.
ಅಂಥದ್ದೇ ಒಂದು ಧಾರಾವಾಹಿಯ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜನರು ಇದನ್ನು ನೋಡಿ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ದಂಗಲ್ ಟಿವಿಯಲ್ಲಿ ಪ್ರಸಾರವಾಗುವ ‘ಇಷ್ಕ್ ಕಿ ದಸ್ತಾನ್ ನಾಗಮಣಿ’ ಧಾರಾವಾಹಿಯ ದೃಶ್ಯ ಇದಾಗಿದೆ.
ನಾಯಕ ಶಂಕರ್ ಟೆರೇಸ್‌ನಿಂದ ಬೀಳುತ್ತಾನೆ. ಉಳಿದವರು ಭಯದಿಂದ ನಿಂತಲ್ಲಿಯೇ ಕಿರುಚಿಕೊಳ್ಳುತ್ತಾರೆ. ಆದರೆ ನಾಯಕಿ ಅಂದರೆ ನಾಯಕನ ಪತ್ನಿ ಮಾತ್ರ ಸಾವಿಗೂ ಭಯಪಡದೇ ತಾನೂ ಸೂಪರ್ವುಮೆನ್ ರೀತಿ ಹಾರುತ್ತಾಳೆ. ಅಲ್ಲಿರುವ ಗಾಳಿಪಟವನ್ನು ಹಿಡಿದು ನಾಯಕನ ಕೈಹಿಡಿದು ಪ್ರಾಣ ಕಾಪಾಡುತ್ತಾಳೆ!
ತೀರಾ ವಿಚಿತ್ರ ಎನಿಸುವ ಈ ದೃಶ್ಯ ಕಂಡು ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ದೃಶ್ಯವನ್ನು ನೋಡಿ ನಾನು ಮೂರ್ಚೆ ಹೋದೆ ಎಂದು ಕೆಲವರು ಹೇಳುತ್ತಿದ್ದರೆ, ಪ್ರೀತಿಯಲ್ಲಿ ಬೀಳುವುದು ಎಂದರೆ ಇದೇನಾ ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದಾರೆ. ಪ್ರೀತಿಯಲ್ಲಿ ಬೀಳುವುದಿದ್ದರೆ ಹೀಗೆ ಬೀಳಿ, ಇಲ್ಲದಿದ್ದರೆ ನೀವು ವೇಸ್ಟ್ ಎಂದು ಶೀರ್ಷಿಕೆ ನೀಡಿ ಈ ವಿಡಿಯೋ ವೈರಲ್ ಮಾಡಲಾಗುತ್ತಿದೆ!