ಅಹಮದಾಬಾದ್: ಕುತೂಹಲಕಾರಿ ಘಟನೆಯೊಂದರಲ್ಲಿ, ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ಓಡಿಹೋಗಿದ್ದಕ್ಕೆ, ಪೊಲೀಸರ ಹುಡುಕಾಟ ವೆಚ್ಚವನ್ನು ಭರಿಸುವಂತೆ ಆತನಿಗೆ ಗುಜರಾತ್ ಹೈಕೋರ್ಟ್ ಆದೇಶಿಸಿದೆ.
ಅಹಮದಾಬಾದ್‌ನ ವ್ಯಕ್ತಿಯೊಬ್ಬ ತಾನು ಓಡಿಹೋದ ಯುವತಿಯನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರ ಖರ್ಚು ಮಾಡಿದ ಮೊತ್ತದ ಅರ್ಧದಷ್ಟು ಹಣವನ್ನು ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಈಗಾಗಲೇ ವಿವಾಹವಾಗಿದ್ದ ರಾಘಭಾಯಿ ಪರ್ಮಾರ್, ಮೇ 2021 ರಲ್ಲಿ ರಾಜ್‌ಕೋಟ್‌ನಿಂದ 20 ವರ್ಷದ ಯುವತಿಯೊಂದಿಗೆ ಓಡಿಹೋಗಿದ್ದ.
ಪರ್ಮಾರ್ ಜೊತೆ ಓಡಿಹೋದ ಯುವತಿಯನ್ನು ಪತ್ತೆಹಚ್ಚಲು ಪೊಲೀಸರು ಏಳು ತಿಂಗಳಿಗಿಂತ ಹೆಚ್ಚು ಕಾಲ ಹುಡುಕಾಡಿದ್ದಾರೆ. ಯುವತಿ ನಾಪತ್ತೆಯಾದಾಗ ಆಕೆಯ ತಂದೆ ಹೈಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಪೊಲೀಸರು ಆಕೆಗಾಗಿ ಹುಡುಕಾಟ ಮುಂದುವರೆಸಿದ್ದರು. ಏಳು ತಿಂಗಳ ನಂತರ ಈ ಜೋಡಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಯುವತಿಯನ್ನು ಮರಳಿ ಪೋಷಕರ ಬಳಿ ಕಳುಹಿಸಲಾಗಿದೆ.
ಅಂದಹಾಗೆ, ಪರ್ಮಾರ್ ಈಗಾಗಲೇ ಬೇರೊಬ್ಬರನ್ನು ಮದುವೆಯಾಗಿದ್ದಾನೆ ಎಂಬುದು ಬಹಿರಂಗವಾದಾಗ, ಯುವತಿಯನ್ನು ಪತ್ತೆಹಚ್ಚಲು ಮತ್ತು ಪರ್ಮಾರ್‌ನಿಂದ ಮರಳಿ ಕರೆತರಲು ಖರ್ಚು ಮಾಡಿದ ಮೊತ್ತವನ್ನು ಮರುಪಡೆಯಲು ಹೈಕೋರ್ಟ್ ನಿರ್ಧರಿಸಿದೆ. ವಸೂಲಿ ಆದೇಶವು ಯುವತಿಯೊಂದಿಗೆ ಓಡಿಹೋಗಿದ್ದಕ್ಕಾಗಿ ಮತ್ತು ಈಗಾಗಲೇ ಮದುವೆಯಾಗಿದ್ದರೂ ಸಹ ಆಕೆಯನ್ನು ಶೋಷಣೆ ಮಾಡಿದ್ದಕ್ಕೆ ಶಿಕ್ಷೆಯಾಗಿದೆ ಎಂದು ಹೇಳಿದೆ.
ಯುವತಿಯನ್ನು ವಾಪಸ್ ಕರೆತರಲು ಪೊಲೀಸರು ಒಟ್ಟು 1,17,500 ರೂ. ಖರ್ಚು ಮಾಡಿದ್ದಾರೆ. ಹೀಗಾಗಿ ಕೋರ್ಟ್ ಆದೇಶದಂತೆ ಪರ್ಮಾರ್ ಈ ಮೊತ್ತದ ಅರ್ಧದಷ್ಟು ಅಂದ್ರೆ 55,000 ರೂ. ಪಾವತಿ ಮಾಡಬೇಕಾಗುತ್ತದೆ. ಈ ಮೊತ್ತವನ್ನು ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇಡುವಂತೆ ಪರ್ಮಾರ್‌ಗೆ ಕೋರ್ಟ್ ಆದೇಶಿಸಿದೆ. ಹಣವನ್ನು ಪಾವತಿಸಲು ವಿಫಲವಾದಲ್ಲಿ, ನ್ಯಾಯಾಂಗ ನಿಂದನೆಗೆ ಗುರಿಯಾಗುವ ಸಾಧ್ಯತೆ ಇದೆ.