ತನ್ನ ಗೆಳೆಯನನ್ನು ಭೇಟಿಯಾಗಲು, ಮಹಿಳೆಯೊಬ್ಬರು ಆತನ ಆರು ವರ್ಷದ ಪುಟ್ಟ ಸಹೋದರನನ್ನು ಅಪಹರಣ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ವಿಲಕ್ಷಣ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಫೆಬ್ರವರಿ 15ನೇ ತಾರೀಖಿನಂದು ಈ ಘಟನೆ ನಡೆದಿದೆ. ಹಿಮ್ಮತ್ ಘರಿ ಹಳ್ಳಿಯಲ್ಲಿನ ತನ್ನ ನಿವಾಸದ ಮುಂದೆ ಆಟ ಆಡುತ್ತಿದ್ದ ಆರು ವರ್ಷದ ಡೋರಿಲಾಲ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾನೆ. ಇದರಿಂದ ಗಾಬರಿಗೊಂಡ ಆತನ ಪೋಷಕರು ಚಟರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಹುಡುಗನನ್ನು ಹುಡುಕುವ ಕಾರ್ಯಾಚರಣೆ ಶುರುಮಾಡಿದರು. ಅಪಹರಣವಾದ ಆರು ದಿನಗಳ ನಂತರ ಡೋರಿಲಾಲ್ ಮರಳಿ ಮನೆ ಸೇರಿದ್ದಾನೆ.
ಡೋರಿಲಾಲ್ ನ ಹಿರಿಯ ಸಹೋದರ 20 ವರ್ಷದ ಹೀರಾಲಾಲ್ ಗೆ, ಆತನ ಪಕ್ಕದ ಹಳ್ಳಿಯ 32 ವರ್ಷದ ಪಿಂಕಿ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು. ಆದರೆ ಕೆಲ ತಿಂಗಳ ಹಿಂದೆ ಹೀರಾಲಾಲ್ ಗೆ ಕೆಲಸ ಸಿಕ್ಕ ಕಾರಣ ಆತ ಗುರುಗ್ರಾಮದಲ್ಲಿ ನೆಲೆಸಿದ್ದ. ಇದರಿಂದ ಪಿಂಕಿ ಹಾಗೂ ಹೀರಾ ಭೇಟಿಯಾಗಿರಲಿಲ್ಲ. ಹೀಗಾಗಿ ಆತನ ಸಹೋದರನನ್ನು ಅಪಹರಣ ಮಾಡಿದರೆ ಪ್ರಿಯತಮನನ್ನು ಕಾಣಬಹುದು ಎಂದು ಪಿಂಕಿ ಹೀಗೆ ಮಾಡಿದ್ದಳೆಂದು ತನಿಖೆ ವೇಳೆ ಬಹಿರಂಗವಾಗಿದೆ.
ಪಿಂಕಿ ತನ್ನ ಸೋದರಳಿಯ ಲವ್ಕೇಶ್ ಸಹಾಯದೊಂದಿಗೆ ಈ ಕೃತ್ಯ ಎಸಗಿದ್ದಾಳೆ. ಅಷ್ಟೇ ಅಲ್ಲಾ ತನ್ನ ಸಹೋದರನನ್ನು ಯಾರು ಅಪಹರಣ ಮಾಡಿದ್ದಾರೆಂದು ಹೀರಾಗೆ ಮೊದಲಿಂದಲೂ ತಿಳಿದಿತ್ತು. ಪಿಂಕಿ ಈ ವಿಚಾರವಾಗಿ ಹೀರಾಗೆ ಫೋನ್ ಕರೆ ಮಾಡಿ ಬೆದರಿಕೆ ಸಹ ಹಾಕಿದ್ದಳು. ಆದರೆ ಹೀರಾಲಾಲ್ ಮಾತ್ರ ತನ್ನ ಕುಟುಂಬ ಹಾಗೂ ಪೊಲೀಸರ ಮುಂದೆ ತನಗೇನು ತಿಳಿದಿಲ್ಲ ಎಂದು ನಾಟಕವಾಡಿಕೊಂಡಿದ್ದ. ಕಡೆಗೆ ಪೊಲೀಸರು ಎಲ್ಲರ ಫೋನ್ ಟ್ರೇಸ್ ಮಾಡಿದ ನಂತರ ಪಿಂಕಿ ಹಾಗೂ ಹೀರಾ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ.
ಪಿಂಕಿ ಸೋದರಳಿಯ ಲವ್ಕೇಶ್ ಡೋರಿಲಾಲ್ ನನ್ನು ಫೆಬ್ರವರಿ 15ರಂದು ಅಪಹರಿಸಿ, ಆಕೆಗೆ ಒಪ್ಪಿಸಿದ್ದಾನೆ. ಪಿಂಕಿಯ ಫೋನ್ ಲೋಕೇಷನ್ ಪತ್ತೆಹಚ್ಚಿದ ಪೊಲೀಸರು ಬಾಲಕನನ್ನು ಆತನ ಪೋಷಕರಿಗೆ ಒಪ್ಪಿಸಿದ್ದಾರೆ. ನಂತರ ಪಿಂಕಿ, ಹೀರಾಲಾಲ್ ಹಾಗೂ ಲವ್ಕೇಶ್ ಮೂವರನ್ನು ಬಂಧಿಸಿದ್ದಾರೆ.