ಕಾರ್ಡಿಯಾಕ್ ಅರೆಸ್ಟ್ ಅತ್ಯಂತ ಅಪಾಯಕಾರಿ ಆರೋಗ್ಯ ಸಮಸ್ಯೆ. ಯಾವುದೇ ಸೂಚನೆಯಿಲ್ಲದೆ ದಿಢೀರನೆ ಸಂಭವಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದಯ ಸ್ತಂಭನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ವಯೋವೃದ್ಧರು ಮಾತ್ರವಲ್ಲದೆ ಯುವಕರು ಕೂಡ ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಹೃದಯ ಸ್ತಂಭನವಾದಾಗ ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಪರಿಣಾಮ ಜೀವಕ್ಕೇ ಕುತ್ತು ಬರಬಹುದು. ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡೂ ಒಂದೇ ಎಂದು ಭಾವಿಸಬೇಡಿ. ಎರಡೂ ಬೇರೆ ಬೇರೆ ತೆರನಾದ ಸಮಸ್ಯೆಗಳು. ವ್ಯಕ್ತಿಯ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಅದನ್ನು ಹಠಾತ್ ಹೃದಯ ಸ್ತಂಭನ ಅಥವಾ ಕಾರ್ಡಿಯಾಕ್ ಅರೆಸ್ಟ್ ಎಂದು ಕರೆಯಲಾಗುತ್ತದೆ.
ಹೃದಯ ಬಡಿತದಲ್ಲಿ ಸಮಸ್ಯೆಯಿಂದ ಇದು ಸಂಭವಿಸುತ್ತದೆ. ಸಾಮಾನ್ಯ ಹೃದಯ ಬಡಿತದ ಬದಲು, ಹೃದಯ ಬಡಿತವು ವೇಗವಾಗುತ್ತದೆ. ಇದರ ಧ್ವನಿ ವ್ಯಕ್ತಿಗೂ ಕೇಳಿಸುತ್ತದೆ. ರಕ್ತದೊತ್ತಡದಿಂದಾಗಿ ರಕ್ತವು ಕಡಿಮೆಯಾಗಲು ಪ್ರಾರಂಭಿಸುತ್ತದೆ, ಪೂರೈಕೆ ನಿಂತುಹೋಗುತ್ತದೆ ಮತ್ತು ವ್ಯಕ್ತಿಯು ಮೂರ್ಛೆಹೋಗುತ್ತಾನೆ. ಕೆಲವೊಮ್ಮೆ ಇದು ಮಾರಣಾಂತಿಕವಾಗಬಹುದು. ಕಾರ್ಡಿಯಾಕ್ ಅರೆಸ್ಟ್‌ನ ಲಕ್ಷಣಗಳು ಯಾವುವು ಎಂಬುದನ್ನು ತಿಳಿದುಕೊಂಡರೆ ಮುನ್ನೆಚ್ಚರಿಕೆ ವಹಿಸಬಹುದು.
ಹೃದಯ ಬಡಿತ ನಿಲ್ಲುತ್ತದೆ
ಒಬ್ಬ ವ್ಯಕ್ತಿಗೆ ಹಠಾತ್ ಹೃದಯ ಸ್ತಂಭನವಾದಾಗ, ಅವನ ಹೃದಯ ಬಡಿತವು ನಿಂತು ಹೋಗಬಹುದು. ಈ ಪರಿಸ್ಥಿತಿಯು ತುಂಬಾ ಗಂಭೀರವಾಗಬಹುದು, ಈ ಸಮಯದಲ್ಲಿ ವ್ಯಕ್ತಿ ಜೀವ ಕಳೆದುಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ಹೃದಯ ಬಡಿತ ಕಡಿಮೆಯಾಗುತ್ತಿದೆ ಎಂದು ಅನಿಸಿದರೆ ನಿರ್ಲಕ್ಷಿಸಬೇಡಿ.
ಉಸಿರಾಟದ ತೊಂದರೆ
ಹೃದಯ ಸ್ತಂಭನ ಉಂಟಾದಾಗ ನಿಮಗೆ ಉಸಿರಾಡಲು ತೊಂದರೆಯಾಗಬಹುದು. ಒಬ್ಬ ವ್ಯಕ್ತಿಯು ಇದ್ದಕ್ಕಿದ್ದಂತೆ ಉಸಿರಾಟವನ್ನು ನಿಲ್ಲಿಸಿದಾಗ, ಹೃದಯ ಸ್ತಂಭನದ ಸಮಸ್ಯೆಯಾಗಿರಬಹುದು. ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸುವುದೇ ಇದಕ್ಕೆ ಕಾರಣ. ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಬಳಿಗೆ ಹೋಗಿ.
ಮೂರ್ಛೆ ಮತ್ತು ತಲೆತಿರುಗುವಿಕೆ
ಹೃದಯ ಸ್ತಂಭನದಿಂದ ತಲೆತಿರುಗುವಿಕೆ ಬರಬಹುದು, ಇದರೊಂದಿಗೆ ವ್ಯಕ್ತಿ ಮೂರ್ಛೆ ಹೋಗಬಹುದು, ಇದಕ್ಕೆ ಕಾರಣ ಹೃದಯ ಸರಿಯಾಗಿ ಕೆಲಸ ಮಾಡದಿರುವುದು. ತಲೆಸುತ್ತು ಬಂದಂತೆ, ಮೂರ್ಛೆ ಹೋದಂತೆ ಅನಿಸಿದರೆ ತಕ್ಷಣವೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ.