ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ. ಈಗ ವೃದ್ಧರು ಮಾತ್ರವಲ್ಲ, 30 ವರ್ಷದೊಳಗಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಗೊತ್ತೇ ಆಗದಂತೆ ಹೃದಯಾಘಾತವು ಪ್ರಾಣಕ್ಕೇ ಕುತ್ತು ತಂದುಬಿಡುತ್ತದೆ. ಈ ಸೈಲೆಂಟ್ ಹಾರ್ಟ್ ಅಟ್ಯಾಕ್ ತುಂಬಾ ಅಪಾಯಕಾರಿ. ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಈ ಸಮಸ್ಯೆ ಹೆಚ್ಚಾಗಿದೆ. ಸೈಲೆಂಟ್ ಹಾರ್ಟ್ ಅಟ್ಯಾಕ್ ಎಂದರೇನು? ಸಾಮಾನ್ಯ ಹೃದಯಾಘಾತಕ್ಕಿಂತ ಇದು ಎಷ್ಟು ಭಿನ್ನವಾಗಿದೆ ಎಂಬುದನ್ನೆಲ್ಲ ತಿಳಿಯೋಣ.
ಸೈಲೆಂಟ್ ಹಾರ್ಟ್ ಅಟ್ಯಾಕ್ ಎಂದರೇನು?
ಇದನ್ನು ಸೈಲೆಂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (MI) ಎಂದೂ ಕರೆಯಲಾಗುತ್ತದೆ. ಇದು ಎದೆನೋವು ಅಥವಾ ಅಸ್ವಸ್ಥತೆ, ಉಸಿರಾಟದ ತೊಂದರೆ, ಆಯಾಸದಂತಹ ವಿಶಿಷ್ಟ ಲಕ್ಷಣಗಳಿಲ್ಲದೆ ಬರುವ ಒಂದು ರೀತಿಯ ಹೃದಯಾಘಾತವಾಗಿದೆ. ಬದಲಾಗಿ ವ್ಯಕ್ತಿಯು ಕೇವಲ ಸೌಮ್ಯವಾದ ರೋಗಲಕ್ಷಣಗಳನ್ನು ಅನುಭವಿಸಬಹುದು ಅಥವಾ ಯಾವುದೇ ರೋಗಲಕ್ಷಣಗಳೇ ಇರುವುದಿಲ್ಲ. ಇದನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ.ಆದಾಗ್ಯೂ ಸಾಮಾನ್ಯ ಹೃದಯಾಘಾತದಂತೆ, ಹೃದಯದ ಒಂದು ಭಾಗಕ್ಕೆ ರಕ್ತದ ಹರಿವು ನಿರ್ಬಂಧಿಸಿದಾಗ ಸೈಲೆಂಟ್ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಹೃದಯದ ಸ್ನಾಯುಗಳಿಗೆ ಹಾನಿಯಾಗುತ್ತದೆ.
ಸೈಲೆಂಟ್ ಹಾರ್ಟ್ ಅಟ್ಯಾಕ್ ಅಪಾಯ ಯಾರಿಗೆ ಹೆಚ್ಚು?
ಅಧಿಕ ರಕ್ತದೊತ್ತಡ, ಮಧುಮೇಹ, ವೃದ್ಧಾಪ್ಯ ಮತ್ತು ಬೊಜ್ಜಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಅಪಾಯ ಹೆಚ್ಚು. ಇದಲ್ಲದೆ, ಕೆಲವೊಮ್ಮೆ ಅಂಡರ್‌ಲೈನ್ ರೋಗದಿಂದಾಗಿ ಅಪಧಮನಿಗಳು ನಿರ್ಬಂಧಿಸಲ್ಪಡುತ್ತವೆ. ಇದು ಸೈಲೆಂಟ್ ಹಾರ್ಟ್ ಅಟ್ಯಾಕ್ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ ಅನೇಕ ಜನರು ಹೃದಯಾಘಾತದ ಲಕ್ಷಣಗಳನ್ನು ಅಸಿಡಿಟಿ ಅಥವಾ ಇನ್ನಾವುದೇ ಸಮಸ್ಯೆ ಎಂದು ತಪ್ಪಾಗಿ ಭಾವಿಸಿ ನಿರ್ಲಕ್ಷಿಸುತ್ತಾರೆ.
ಸೈಲೆಂಟ್ ಹೃದಯಾಘಾತವನ್ನು ತಡೆಯುವುದು ಹೇಗೆ?
ಆರೋಗ್ಯಕರ ಆಹಾರ: ಆರೋಗ್ಯಕರ ಆಹಾರವನ್ನು ಸೇವಿಸುವುದು ಇದಕ್ಕೆ ಉತ್ತಮ ಪರಿಹಾರವಾಗಿದೆ. ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾದ ಹಣ್ಣುಗಳು, ತರಕಾರಿಗಳು, ವಾಲ್‌ನಟ್ಸ್, ಬೆಣ್ಣೆ, ಮೂಲಂಗಿ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿ.
ವ್ಯಾಯಾಮ: ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ನಿಮ್ಮ ಹೃದಯವನ್ನು ಆರೋಗ್ಯವಾಗಿಡಬಹುದು. ಯೋಗ, ಧ್ಯಾನ ಮತ್ತು ಓಟದಂತಹ ಸಕ್ರಿಯ ಚಟುವಟಿಕೆಗಳು ಹೃದಯಕ್ಕೆ ಒಳ್ಳೆಯದು.
ತಂಬಾಕು ಮತ್ತು ಮದ್ಯದ ಕಡಿಮೆ ಸೇವನೆ: ತಂಬಾಕು ತಿನ್ನುವವರು ಅಥವಾ ಧೂಮಪಾನಿಗಳು ಮತ್ತು ಹೆಚ್ಚು ಮದ್ಯಪಾನ ಮಾಡುವವರ ಹೃದಯಕ್ಕೆ ಅಪಾಯವಿರುತ್ತದೆ. ಅದಕ್ಕಾಗಿಯೇ ತಂಬಾಕು ಮತ್ತು ಮದ್ಯದ ಸೇವನೆಯನ್ನು ನಿಲ್ಲಿಸಬೇಕು.
ತೂಕ ಇಳಿಸಿಕೊಳ್ಳಿ: ಅಧಿಕ ತೂಕ ಹೊಂದಿರುವವರು ತೂಕ ಇಳಿಸಿಕೊಳ್ಳಬೇಕು. ಇದು ಹೃದಯಕ್ಕೆ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ಒತ್ತಡವನ್ನು ಕಡಿಮೆ ಮಾಡಿ: ಒತ್ತಡ ಕೂಡ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ, ಪ್ರಾಣಾಯಾಮ ಇತ್ಯಾದಿಗಳನ್ನು ರೂಢಿಸಿಕೊಳ್ಳಿ.
ನಿಯಮಿತ ತಪಾಸಣೆ: ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಆಗಾಗ ಪರೀಕ್ಷಿಸಿಕೊಳ್ಳಿ. ನಿಮಗೆ ಯಾವುದೇ ರೀತಿಯ ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ನಿಯಮಿತ ಔಷಧಿ ಸೇವನೆ: ನೀವು ಯಾವುದೇ ವೈದ್ಯಕೀಯ ತೊಂದರೆಗೆ ತುತ್ತಾಗಿದ್ದರೆ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಿ ಮತ್ತು ವೈದ್ಯರಿಂದ ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳುವುದು ಸೂಕ್ತ.