ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಹೃಷಿಕೇಶ, ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದು, ಭಾರೀ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ.
ಹರಿದ್ವಾರದಿಂದ ಹೃಷಿಕೇಶಕ್ಕೆ ಬಸ್, ರೈಲು, ಟ್ಯಾಕ್ಸಿ ಸೌಲಭ್ಯವಿದೆ. ಹಿಮಾಲಯಕ್ಕೆ ಹೆಬ್ಬಾಗಿಲಿನಂತಿರುವ ಈ ಸ್ಥಳವನ್ನು ರಿಷಿಕೇಶ ಎಂದೂ ಕರೆಯಲಾಗುತ್ತದೆ. ಪುರಾತನ ನಗರ ಇದಾಗಿದ್ದು, ಬದರಿನಾಥ, ಗಂಗೋತ್ರಿ, ಯಮುನೋತ್ರಿ ಮೊದಲಾದ ತೀರ್ಥಕ್ಷೇತ್ರಗಳಿಗೆ ಇದು ಪ್ರವೇಶ ದ್ವಾರವಾಗಿದೆ.
ಈ ಸ್ಥಳದಿಂದಲೇ ಗಂಗಾ ನದಿ ಪರ್ವತಗಳ ಸಮೀಪದಿಂದ ಜಾರಿ ಮೈದಾನದಲ್ಲಿ ಹರಿಯುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ. ಮನಸ್ಸಿಗೆ ಮುದ ನೀಡುವ ಹಲವು ದೃಶ್ಯಗಳು ಇಲ್ಲಿವೆ.
ದೇವಾಲಯಗಳು, ಆಶ್ರಮಗಳು, ಧರ್ಮ ಶಾಲೆಗಳು, ಯೋಗ ಕೇಂದ್ರ ಮೊದಲಾದವವು ಇಲ್ಲಿದ್ದು, ದೇಶ, ವಿದೇಶಗಳ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ.
ತ್ರಿವೇಣಿ ಘಾಟ್ ನಲ್ಲಿ ನಡೆಯುವ ‘ಗಂಗಾ ಆರತಿ’ ಬಲು ಪ್ರಸಿದ್ಧವಾಗಿದ್ದು, ಇದನ್ನು ಕಣ್ತುಂಬಿಕೊಳ್ಳುವುದೇ ಭಕ್ತರಿಗೆ ಆನಂದ ನೀಡುತ್ತದೆ. ನೀಲಕಂಠ ಮಹಾದೇವ ಮಂದಿರ, ರಾಮಝೂಲಾ, ವಸಿಷ್ಠ ಗುಹೆ, ಸೇತುವೆ ಮೊದಲಾದವು ನೋಡಬಹುದಾದ ಸ್ಥಳಗಳು.
ಪುರಾಣದಲ್ಲಿಯೂ ಹೃಷಿಕೇಶದ ಬಗ್ಗೆ ಪ್ರಸ್ತಾಪವಿದೆ. ಶ್ರೀರಾಮ ಇಲ್ಲಿ ತಪಸ್ಸು ಮಾಡಿದ್ದನೆಂದು, ಲಕ್ಷ್ಮಣ ನಾರಿನ ಹಗ್ಗದಿಂದ ಕಟ್ಟಲಾಗಿದ್ದ ಸೇತುವೆಯಿಂದ ಗಂಗಾ ನದಿಯನ್ನು ದಾಟಿದ್ದನೆಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ತೂಗು ಸೇತುವೆ ನಿರ್ಮಿಸಲಾಗಿದೆ. ಮಾಹಿತಿ ಪಡೆದು ಒಮ್ಮೆ ಹೃಷಿಕೇಶ ನೋಡಿ ಬನ್ನಿ.