ರಾಜ್ಯದಲ್ಲಿ ಮುಂಗಾರು ಚುರುಕು ಪಡೆದುಕೊಂಡಿರುವ ಕಾರಣ ವ್ಯಾಪಕ ಮಳೆಯಾಗುತ್ತಿದ್ದು, ರೈತರು ತಮ್ಮ ಹೊಲ-ಗದ್ದೆಗಳನ್ನು ಹಸನು ಮಾಡಿಕೊಂಡು ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ರಸಗೊಬ್ಬರ ಖರೀದಿಸಿದ್ದ ರೈತರೊಬ್ಬರು ಅದರಲ್ಲಿದ್ದ ಕಲ್ಲುಗಳನ್ನು ಕಂಡು ದಂಗಾಗಿದ್ದಾರೆ. ಇಂಥದೊಂದು ಘಟನೆ ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನಲ್ಲಿ ನಡೆದಿದೆ.
ಮಲೆಬೆನ್ನೂರಿನ ರೈತ ಸಿದ್ದೇಶ್ ಎಂಬವರು ಸ್ಥಳೀಯ ಅಂಗಡಿಯೊಂದರಲ್ಲಿ ಪ್ರಸಿದ್ಧ ಕಂಪನಿಯ ರಸಗೊಬ್ಬರ ಖರೀದಿಸಿದ್ದು, ಅದನ್ನು ತೆರೆದು ನೋಡಿದ ಸಂದರ್ಭದಲ್ಲಿ ಗೊಬ್ಬರದಲ್ಲಿ ಕಲ್ಲು ಮಿಶ್ರಣವಾಗಿದ್ದು ಕಂಡುಬಂದಿದೆ.
ಕೂಡಲೇ ರೈತರು ವಾಪಸ್ ಅಂಗಡಿಗೆ ತೆರಳಿ ಈ ವಿಚಾರವನ್ನು ತಿಳಿಸಿದ್ದು, ಕಂಪನಿಯವರನ್ನು ಸ್ಥಳಕ್ಕೆ ಕಲಿಸುವಂತೆ ರಸಗೊಬ್ಬರ ಅಂಗಡಿ ಮಾಲೀಕರಿಗೆ ಒತ್ತಾಯಿಸಿದ್ದಾರೆ. ಮಾಹಿತಿ ಪಡೆದಿರುವ ಕೃಷಿ ಅಧಿಕಾರಿಗಳು, ಕಲ್ಲುಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿ ಬರುವವರೆಗೆ ರಸಗೊಬ್ಬರ ಮಾರಾಟ ಮಾಡದಂತೆ ಅಂಗಡಿಯವರಿಗೆ ತಿಳಿಸಿದ್ದಾರೆ.