ಕಳೆದ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಯನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡಿದ್ದಾರೆ. ಪ್ರವೀಣ್ ಮೃತದೇಹದ ದರ್ಶನಕ್ಕೆ ಆಗಮಿಸಿದ ಬಿಜೆಪಿ ನಾಯಕರ ಮುಂದೆ ಸರಣಿ ಪ್ರಶ್ನೆಗಳನ್ನಿಟ್ಟಿದ್ದು, ಇದಕ್ಕೆ ಉತ್ತರಿಸಲಾಗದೆ ಅವರುಗಳು ಮೌನಕ್ಕೆ ಶರಣಾಗಿದ್ದಾರೆ.
ʼಬೇಕೇ ಬೇಕು ನ್ಯಾಯ ಬೇಕುʼ ಎಂಬ ಘೋಷಣೆಗಳನ್ನು ಕೂಗುತ್ತಿದ್ದ ಹಿಂದೂ ಕಾರ್ಯಕರ್ತರು, ಇನ್ನೆಷ್ಟು ಜನರ ಕೊಲೆಯಾಗಬೇಕು ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಇಂತಹ ಕೃತ್ಯಗಳು ಮುಂದುವರಿಯುತ್ತಲೆ ಇವೆ. ಇವುಗಳಿಗೆ ಕೊನೆ ಎಂದು ಪ್ರಶ್ನಿಸಿದಾಗ ಮೌನವೇ ನಾಯಕರ ಉತ್ತರವಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಸ್ಥಳದಲ್ಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂ ಕಾರ್ಯಕರ್ತರ ಪ್ರಶ್ನೆಗಳನ್ನು ಎದುರಿಸಲಾರದೆ ಮೌನವಾಗಿ ಒಂದೆಡೆ ಕುಳಿತಿರುವುದು ಕಂಡು ಬಂತು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀಡುಬಿಟ್ಟಿರುವ ಪೊಲೀಸರು ಪ್ರವೀಣ್ ಮೃತದೇಹದ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡಿದ್ದಾರೆ. ಇದೀಗ ಬೆಳ್ಳಾರೆಯಿಂದ ಪ್ರವೀಣ್ ಪಾರ್ಥಿವ ಶರೀರ ನೆಟ್ಟಾರು ತಲುಪಿದ್ದು, ವಿಧಿವಿಧಾನಗಳಂತೆ ಅಂತಿಮ ಸಂಸ್ಕಾರ ನಡೆಯಲಿದೆ.