ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಬಂದಾಗ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿಲ್ಲ. ಜನರ ಸಂಕಷ್ಟ ಆಲಿಸಿಲ್ಲ, ಪರಿಹಾರವನ್ನೂ ನೀಡಿಲ್ಲ, ಇವರಿಂದ ಜನರಿಗೆ ಆಗಿರುವ ದ್ರೋಹ ಅನ್ಯಾಯ ಇಡೀ ಕರ್ನಾಟಕಕ್ಕೆ ಗೊತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ನಾಲ್ಕು ಬ್ಯಾಂಕ್ ಗಳನ್ನು ಬೇರೊಂದು ಬ್ಯಾಂಕ್ ಗಳ ಜತೆ ಮರ್ಜ್ ಮಾಡಿದರು. ಮೈಸೂರು ಬ್ಯಾಂಕ್ ಎಂಬ ಹೆಸರು ತೆಗೆದು ಹಾಕಿದರು. ಸಿಂಡಿಕೆಟ್ ಬ್ಯಾಂಕ್ ಇಲ್ಲವಾಗಿಸಿದರು. ವಿಜಯಾ ಬ್ಯಾಂಕ್ ಕೂಡ ಇಲ್ಲ. ನಾಲ್ಕು ಬ್ಯಾಂಕ್ ಗಳನ್ನು ಬೇರೆ ಬ್ಯಾಂಕ್ ಜತೆ ಮರ್ಜ್ ಮಾಡಿದ್ದು ಪ್ರಧಾನಿ ಮೋದಿಯವರು. ಈ ಬ್ಯಾಂಕ್ ಗಳು ಕನ್ನಡಿಗರಿಗೆ ಕೆಲಸ ಕೊಡುತ್ತಿದ್ದವು. ಈಗ ಮರ್ಜ್ ಆದ ಮೇಲೆ ಕನ್ನಡಿಗರಿಗೆ ಕೆಲಸ ಕೊಡುತ್ತಿಲ್ಲ. ಇದು ಕನ್ನಡಿಗರಿಗೆ ಪ್ರಧಾನಿ ಮೋದಿ ಮಾಡಿದ ದ್ರೋಹವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಜನರು ಪರದಾಡಿದರೂ ಆಕ್ಸಿಜನ್ ಪೂರೈಕೆ ಮಾಡಲಿಲ್ಲ. ಹೈಕೋರ್ಟ್ ಸೂಚಿಸಿದ್ದಕ್ಕೆ ಹೈಕೋರ್ಟ್ ಹೇಳಿದಷ್ಟು ಕೊಡಲು ಆಗಲ್ಲ ಎಂದರು. ಸುಪ್ರೀಂ ಕೋರ್ಟ್ ಗೆ ಹೋಗ ಬೇಕಾಯಿತು. ಅಷ್ಟೊತ್ತಿಗೆ ಚಾಮರಾಜನಗರದಲ್ಲಿ ಜನರು ಸತ್ತು ಹೋದರು ಎಂದು ಕಿಡಿಕಾರಿದರು.
ಮೋದಿಯವರು ಪ್ರಧಾನಿಯಾದ ಮೇಲೆ ನಮ್ಮ ತೆರಿಗೆ ಪಾಲು ಕಡಿಮೆಯಾಯಿತು. 5,495 ಕೋಟಿ ವಿಶೇಷ ಅನುದಾನ ನೀಡಬೇಕಿತ್ತು. ಅದನ್ನೂ ಕೊಡಲಿಲ್ಲ. ಆಕ್ಸಿಜನ್ ಕೊಡಲು ಆಗದಿದ್ದವರು ಈಗ ಯೋಗ ಮಾಡ್ತಿದ್ದಾರೆ. ರಾಜ್ಯದಲ್ಲಿ ಇಂದು ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ. ಇದಕ್ಕೆಲ್ಲ ಪ್ರಧಾನಿ ಮೋದಿಯವರೇ ಸಮ್ಮತಿ ನೀಡುವಂತೆ ಸುಮ್ಮನಿದ್ದಾರೆ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ