ಪ್ರವಾಹದ ಮಧ್ಯೆ ಕಾರಿನೊಳಗೆ ಸಿಲುಕಿಕೊಂಡಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸುತ್ತಿರುವ ಎದೆ ಝಲ್ಲೆನ್ನಿಸುವ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಅಮೆರಿಕದ ಅರಿಝೋನಾದಲ್ಲಿ ಈ ಘಟನೆ ನಡೆದಿದೆ.
ಅಪಾಚೆ ಜಂಕ್ಷನ್ ಪೊಲೀಸ್ ಇಲಾಖೆಯು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಪ್ರವಾಹದ ನೀರಿನಲ್ಲಿ ಸಿಲುಕಿರುವ ಕಾರಿನ ಕಿಟಕಿಯನ್ನು ಭೇದಿಸಲು ಪೊಲೀಸ್ ಸಿಬ್ಬಂದಿ ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ.
ಒಬ್ಬ ಮಹಿಳೆ ತನ್ನ ನಾಯಿಯೊಂದಿಗೆ ಕಾರಿನೊಳಗೆ ಸಿಲುಕಿಕೊಂಡಿದ್ದಾಳೆ. ಪೊಲೀಸರು ಮಹಿಳೆಗೆ ಹಿಡಿದಿಡಲು ಹಗ್ಗವನ್ನು ನೀಡುವ ಮೂಲಕ ಕಾರಿನಿಂದ ಹೊರಬರಲು ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಪ್ರವಾಹದ ಭೀಕರದ ನಡುವೆ ಮಹಿಳೆಯು ಕಿಟಕಿಯ ಮೂಲಕ ಬಹಳ ಕಷ್ಟಪಟ್ಟು ಕಾರಿನಿಂದ ಹೊರಬರುತ್ತಾಳೆ.
ಮಹಿಳೆಯನ್ನು ರಕ್ಷಿಸಲು ಸಾಧ್ಯವಾಯಿತಾದ್ರೂ ಆಕೆಯ ಶ್ವಾನವನ್ನು ರಕ್ಷಿಸಲು ಸಾಧ್ಯವಾಗಿಲ್ಲ ಅಂತಾ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಭಾರಿ ಮಳೆ ಸಮಯದಲ್ಲಿ, ಪ್ರವಾಹಕ್ಕೆ ಒಳಗಾದ ರಸ್ತೆಗಳಲ್ಲಿ ಎಂದಿಗೂ ಚಾಲನೆ ಮಾಡಬೇಡಿ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಇನ್ನು ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇಂತಹ ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಗೆ ಇಲಾಖೆ ಮುಂದಾಗಿರುವುದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.