ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕಶನ್ ಎಂಬಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಈ ವೇಳೆ ಗ್ರಾಮದ ಮುಖ್ಯಸ್ಥ ಖೇಮ್ ಸಿಂಗ್ ಅಲರ್ಟ್ ಆಗಿರುವಂತೆ ವಾಟ್ಸಾಪ್ ಮೂಲಕ ಜನರನ್ನು ಎಚ್ಚರಿಸಿದ್ದರು. ಆದ್ರೆ ದುರಂತವೆಂಬಂತೆ ಖೇಮ್ ಸಿಂಗ್ ಮತ್ತವರ ಕುಟುಂಬದ 7 ಸದಸ್ಯರು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ಜೈರಾಮ್ ಠಾಕೂರ್, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳು ಮತ್ತು ಭೂಕುಸಿತ ಉಂಟಾದ ಸ್ಥಳಗಳಿಗೆ ಭೇಟಿ ನೀಡಿದ್ದರು. ಗ್ರಾಮದ ಮುಖಂಡರಾಗಿದ್ದ ಖೇಮ್ ಸಿಂಗ್ ಅವರ ಮನೆ ಸಂಪೂರ್ಣ ನಾಶವಾಗಿದ್ದು, ಜಿಲ್ಲಾಡಳಿತದ ವತಿಯಿಂದ ಮರು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಶನಿವಾರ ಹಿಮಾಚಲ ಪ್ರದೇಶದಾದ್ಯಂತ ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ಕಾಣಿಸಿಕೊಂಡಿತ್ತು. ಸುಮಾರು 36 ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದೆ. 22 ಮಂದಿ ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ. ಐವರು ನಾಪತ್ತೆಯಾಗಿದ್ದು, ಅವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಪ್ರವಾಹ ಹಾಗೂ ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಕಶನ್ ಗ್ರಾಮದಲ್ಲಿ ಭೂಕುಸಿತ ಉಂಟಾಗಿರುವ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.
ಆದ್ರೆ ಭೂಕುಸಿತದಿಂದಾಗಿ ರಸ್ತೆಗಳಲ್ಲಿ ಅಡಚಣೆ ಉಂಟಾಗಿದ್ದರಿಂದ ಸಕಾಲಕ್ಕೆ ತಲುಪಲು ಸಾಧ್ಯವಾಗಿಲ್ಲ. ಈ ಮಧ್ಯೆ ಗ್ರಾಮದ ಮುಖಂಡ ಸಿಂಗ್ ಅವರ ಸಂಬಂಧಿಕರನ್ನು ಭೇಟಿಯಾಗಿ ಸಿಎಂ ಸಾಂತ್ವನ ಹೇಳಿದ್ದಾರೆ. ಮಳೆಯಿಂದ ಹಾನಿಗೀಡಾದ ರಸ್ತೆಗಳ ದುರಸ್ಥಿ, ವಿದ್ಯುತ್ ಮತ್ತು ನೀರು ಪೂರೈಕೆಗೆ ಶೀಘ್ರ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂ ತಿಳಿಸಿದ್ದಾರೆ.
ಟಿಬೆಟಿಯನ್ ಧರ್ಮಗುರು ದಲೈ ಲಾಮಾ, ಸಿಎಂಗೆ ಪತ್ರ ಬರೆದಿದ್ದಾರೆ. ಹಿಮಾಚಲದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಜೀವಹಾನಿ ಮತ್ತು ಆಸ್ತಿ ನಷ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ತವರು ಜಿಲ್ಲೆ ಮಂಡಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ ಇನ್ನೂ ಐವರು ಸಾವನ್ನಪ್ಪಿರುವ ಭೀತಿ ಎದುರಾಗಿದೆ. ಮಂಡಿ-ಕಟೋಲಾ-ಪ್ರಶಾರ್ ರಸ್ತೆಯ ಬಾಘಿ ನುಲ್ಲಾದಲ್ಲಿ ಹಠಾತ್ ಪ್ರವಾಹದಿಂದ ಒಂದೇ ಕುಟುಂಬದ ಆರು ಸದಸ್ಯರು ನಾಪತ್ತೆಯಾಗಿದ್ದಾರೆ. ಬಾಲಕಿಯೊಬ್ಬಳ ದೇಹ ಆಕೆಯ ಮನೆಯಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಕುಟುಂಬದ ಐವರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.