ಲೈವ್ ರಿಪೋರ್ಟಿಂಗ್ ನಾವು ಅಂದುಕೊಂಡಷ್ಟು ಸುಲಭವಲ್ಲ. ವಿಭಿನ್ನ ಸವಾಲುಗಳು, ತೊಂದರೆಗಳು ವರದಿಗಾರಿಕೆ ಸಂದರ್ಭದಲ್ಲಿ ಎದುರಾಗುತ್ತವೆ. ವರದಿಗಾರರು ಕೆಲವೊಮ್ಮೆ ಪರಿಸ್ಥಿತಿಯ ನಿಖರವಾದ ಚಿತ್ರಣವನ್ನು ನೀಡಲು ಸಾಕಷ್ಟು ಕಷ್ಟಪಡಬೇಕಾಗಿ ಬಿಡುತ್ತದೆ, ಅದು ಅವರನ್ನು ಅಪಾಯಕ್ಕೂ ಸಿಲುಕಿಸಬಹುದು.
ಈಗ ಅಂಥದ್ದೇ ವಿಡಿಯೋ ಒಂದು ವೈರಲ್ ಆಗಿದೆ. ಪಾಕಿಸ್ತಾನದ ವರದಿಗಾರನೊಬ್ಬ ಅಲ್ಲಿನ ಪ್ರವಾಹ ಪರಿಸ್ಥಿತಿಯ ನೈಜ ಚಿತ್ರಣವನ್ನು ನೀಡಿದ್ದಾನೆ. ಖುದ್ದು ವರದಿಗಾರನೇ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ಆತನ ಕುತ್ತಿಗೆವರೆಗೂ ಪ್ರವಾಹದ ನೀರು ಬಂದಿದ್ದು, ಆತ ಅದರ ನಡುವೆಯೂ ನೇರ ವರದಿಗಾರಿಕೆಯನ್ನು ಮುಂದುವರಿಸಿದ್ದಾನೆ.
ಆತನ ಇಡೀ ದೇಹ ಮುಳುಗಿದ್ದು, ತಲೆ ಮತ್ತು ಮೈಕ್ ಮಾತ್ರ ವಿಡಿಯೋದಲ್ಲಿ ಕಾಣುತ್ತಿದೆ. ಅನುರಾಗ್ ಅಮಿತಾಬ್ ಎಂಬ ಟ್ವಿಟ್ಟರ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ತಾಣದಲ್ಲಿ ಅನೇಕರು ಪಾಕ್ ವರದಿಗಾರನ ಸಮರ್ಪಣೆ ಮತ್ತು ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿದ್ದಾರೆ. ಕೆಲವರು ವರದಿಗಾರನನ್ನು ಅಪಾಯಕ್ಕೆ ತಳ್ಳಿದ ಸುದ್ದಿ ವಾಹಿನಿಯನ್ನು ಟೀಕಿಸಿದ್ದಾರೆ.
ಕಳೆದ ಒಂದು ದಶಕದಲ್ಲಿ ಪಾಕಿಸ್ತಾನವು ಈವರೆಗೂ ಕಂಡು ಕೇಳರಿಯದಂಥ ಭೀಕರ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಪ್ರವಾಹದಿಂದ ಸತ್ತವರ ಸಂಖ್ಯೆ 1,000 ದಾಟಿದೆ. ಲಕ್ಷಾಂತರ ಜನರು ಮನೆಮಠ ಕಳೆದುಕೊಂಡಿದ್ದಾರೆ.