ಭಾರೀ ಮಳೆಯ ಹೊಡೆತಕ್ಕೆ ತೆಲಂಗಾಣ ತತ್ತರಿಸಿ ಹೋಗಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮನೆಗಳೆಲ್ಲ ಜಲಾವೃತವಾಗಿವೆ. ಜನರು ಜೀವ ಉಳಿಸಿಕೊಳ್ಳಲು ನೀರಿನ ನಡುವೆ ನಡೆದುಕೊಂಡೇ ಸುರಕ್ಷಿತ ಜಾಗಕ್ಕೆ ತೆರಳ್ತಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಚಿಕ್ಕ ಮಗುವನ್ನು ಮಲಗಿಸಿಕೊಂಡು ತಲೆ ಮೇಲೆ ಹೊತ್ತು ಪ್ರವಾಹದ ಮಧ್ಯೆ ತೆರಳ್ತಾ ಇರುವ ದೃಶ್ಯ ವೈರಲ್ ಆಗಿದೆ.
ಆತನನ್ನು ನಿಜವಾದ ಬಾಹುಬಲಿ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಪೆದ್ದಪಲ್ಲಿ ಜಿಲ್ಲೆಯ ಮಹಂತಿ ನಗರದಲ್ಲಿ ನಡೆದಿರೋ ಘಟನೆ ಇದು. ಮೂರು ತಿಂಗಳ ಪುಟ್ಟ ಮಗು ಸೇರಿದಂತೆ ಇಡೀ ಕುಟುಂಬ ಪ್ರವಾಹದಲ್ಲಿ ಸಿಲುಕಿಕೊಂಡಿತ್ತು.
ಪುಟ್ಟ ಕಂದಮ್ಮನನ್ನು ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮಲಗಿಸಲಾಯ್ತು. ಆ ಬುಟ್ಟಿಯನ್ನು ತಂದೆ ತಲೆ ಮೇಲೆ ಹೊತ್ತುಕೊಂಡು ನೀರಿನ ಮಧ್ಯೆ ನಡೆದಿದ್ದಾನೆ. ಕತ್ತಿನವರೆಗೂ ನೀರು ತುಂಬಿದ್ದರಿಂದ ಈ ರೀತಿಯಲ್ಲಿ ಮಗುವನ್ನು ಸುರಕ್ಷಿತವಾಗಿ ಕೊಂಡೊಯ್ದಿದ್ದಾನೆ.