ಭಾರೀ ಪ್ರವಾಹ ಅಸ್ಸಾಂನಲ್ಲಿ ಜನಜೀವನವನ್ನೇ ಅಸ್ತವ್ಯಸ್ತ ಮಾಡಿಬಿಟ್ಟಿದೆ. ಜನರು ಮನೆ ಮಠ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಕಷ್ಟದ ನಡುವೆಯೂ ಪಾನ್ ಅಂಗಡಿ ಮಾಲೀಕನೊಬ್ಬನ ಕ್ರಿಯೇಟಿವಿಟಿ ಎಲ್ಲರ ಗಮನ ಸೆಳೆಯುತ್ತಿದೆ.
ಪ್ರವಾಹದ ನಡುವೆಯೇ ಈತ ಮೊಬೈಲ್ ಶಾಪ್ ಆರಂಭಿಸಿದ್ದು, ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾನೆ. ಗುವಾಹಟಿ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಮನೆಗಳು ಕೂಡ ಜಲಾವೃತವಾಗಿವೆ. ನಡೆದಾಡಲು ರಸ್ತೆ ಕೂಡ ಇಲ್ಲದಂಥ ಪರಿಸ್ಥಿತಿ.
ಆದ್ರೂ ಧೈರ್ಯ ಕಳೆದುಕೊಳ್ಳದ ಧನೇಶ್ವರ್ ದಾಸ್, ಬಾಳೆ ದಿಂಡಿನಿಂದ ತೆಪ್ಪವೊಂದನ್ನು ತಯಾರಿಸಿದ್ದಾನೆ. ಆ ತೆಪ್ಪದ ಮೇಲೆ ನಿಂತುಕೊಂಡು ಅಂಗಡಿ ನಡೆಸ್ತಾನೆ. ಮಳೆ, ಪ್ರವಾಹ, ಸುತ್ತಲೂ ನೀರು ಇದರ ನಡುವೆಯೂ ತನ್ನ ಕಾಯಕವನ್ನು ಈತ ಬಿಟ್ಟಿಲ್ಲ. ದೊಡ್ಡ ಕೊಡೆಯೊಂದನ್ನು ಹಿಡಿದುಕೊಂಡು ತನ್ನ ತೇಲುವ ಅಂಗಡಿ ಮೂಲಕ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾನೆ.
ರುಕ್ಮಿಣಿ ಗೌನ್ ಏರಿಯಾದಲ್ಲಿ ಇವನ ಅಂಗಡಿಯಿದೆ. ನೀರು, ಮೇಣದ ಬತ್ತಿ, ಬೆಂಕಿ ಪೊಟ್ಟಣ ಸೇರಿದಂತೆ ಅನೇಕ ಅಗತ್ಯ ವಸ್ತುಗಳನ್ನು ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದಾನೆ. ಈತನ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.
ಪ್ರವಾಹ ಆಸ್ಸಾಂಗೇನೂ ಹೊಸದಲ್ಲ. ಪ್ರತಿವರ್ಷವೂ ವರುಣಾರ್ಭಟಕ್ಕೆ ಇಡೀ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. ಈ ಬಾರಿ ಪ್ರವಾಹದ ಹೊಡೆತಕ್ಕೆ ಸುಮಾರು 33 ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ. ಈವರೆಗೆ 71 ಮಂದಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.