ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಈ ಸಂದರ್ಭದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಾರ್ವಜನಿಕರು ಮುಂದಾಗುತ್ತಾರೆ. ಇಂತಹ ಪ್ರವಾಸ ಪ್ರಿಯರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ಯಾಕೇಜ್ ಟೂರ್ ಆರಂಭಿಸಿದೆ.
ವಿಶ್ವವಿಖ್ಯಾತ ಜೋಗ ಜಲಪಾತ ಈಗ ಧುಮುಕಿ ಹರಿಯುವ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು, ಹೀಗಾಗಿ ಜುಲೈ 22 ರಿಂದ ವಾರಾಂತ್ಯ (ಶುಕ್ರವಾರ ಮತ್ತು ಶನಿವಾರ) ದಿನದಂದು ಬೆಂಗಳೂರು – ಜೋಗ ಜಲಪಾತ ಪ್ಯಾಕೇಜ್ ಟೂರ್ ಆರಂಭವಾಗುತ್ತಿದೆ.
ನಾನ್ ಎಸಿ ಸ್ಲೀಪರ್ ಬಸ್ ರಾತ್ರಿ 10:30 ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ಶಿವಮೊಗ್ಗ – ಸಾಗರ ಮಾರ್ಗವಾಗಿ ಜೋಗ ತಲುಪಲಿದೆ. ವಯಸ್ಕರಿಗೆ 2,300 ಹಾಗೂ ಮಕ್ಕಳಿಗೆ (6 ರಿಂದ 12 ವರ್ಷ) 2,100 ಪ್ರಯಾಣದರ ನಿಗದಿಪಡಿಸಲಾಗಿದೆ.
ಹಾಗೆಯೇ ಶನಿವಾರ, ಭಾನುವಾರ ಮತ್ತು ರಜಾ ದಿನಗಳಂದು ಕೆಎಸ್ಆರ್ಟಿಸಿ, ವೇಗದೂತ ಬಸ್ ನಲ್ಲಿ ಒಂದು ದಿನದ ಪ್ರವಾಸ ಪ್ಯಾಕೇಜ್ ಸೇವೆ ಆರಂಭಿಸಿದ್ದು, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಗಗನಚುಕ್ಕಿ, ಭರಚುಕ್ಕಿ ಫಾಲ್ಸ್ ಗೆ ಕರೆದುಕೊಂಡು ಹೋಗಲಾಗುತ್ತದೆ. ಪ್ರವಾಸ ದರ ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ 250 ರೂಪಾಯಿ ನಿಗದಿಪಡಿಸಲಾಗಿದೆ.