ನಗರದ ಜಂಜಾಟದಿಂದ ಬೇಸತ್ತು ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಹುತೇಕರು ಇಷ್ಟಪಡುತ್ತಾರೆ. ಇಂತಹ ಪ್ರವಾಸಿ ಸ್ಥಳಗಳಲ್ಲಿ ನಂದಿ ಗಿರಿಧಾಮವೂ ಒಂದು. ವಾರಾಂತ್ಯಗಳಲ್ಲಿ ನಂದಿ ಗಿರಿಧಾಮಕ್ಕೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದೀಗ ಅಂತವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಹೌದು, ನಂದಿ ಗಿರಿಧಾಮದಲ್ಲಿ ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ಯೋಜನೆಯ ವೆಚ್ಚ 93.40 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಒಟ್ಟು 2.93 ಕಿಮೀ ಉದ್ದದ ಈ ರೋಪ್ ವೇ ನಂದಿ ಗಿರಿಧಾಮದ ಆಕರ್ಷಣೀಯ ಕೇಂದ್ರವಾಗಲಿದೆ. ಇದರ ಜೊತೆಗೆ ರೆಸ್ಟೋರೆಂಟ್, ಕೆಫೆ, ಆಹಾರ ಮಳಿಗೆ ಸೇರಿದಂತೆ ಇತರ ಮಳಿಗೆಗಳನ್ನೂ ಸಹ ನಿರ್ಮಿಸಲಾಗುತ್ತದೆ.
ರೋಪ್ ವೇ ನಲ್ಲಿ ಒಟ್ಟು 50 ಕ್ಯಾಬಿನ್ ಗಳಿರಲಿದ್ದು, ಒಂದೊಂದು ಕ್ಯಾಬಿನ್ ನಲ್ಲಿ ಹತ್ತು ಮಂದಿ ಪ್ರಯಾಣಿಸಬಹುದಾಗಿದೆ. 2.93 ಕಿಮೀ ಉದ್ದದ ಈ ರೋಪ್ ವೇ, ಬೆಟ್ಟದ ತಪ್ಪಲಿನಿಂದ ಎತ್ತರದ ಪ್ರದೇಶಕ್ಕೆ ತಲುಪಲು 28 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ರೋಪ್ ವೇ ನಲ್ಲಿ ಸಾಗುವಾಗ ನಿಸರ್ಗ ಪ್ರಿಯರು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.