ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಕೋತಿಯೊಂದು ವ್ಯಕ್ತಿಯೊಬ್ಬರ ಮೇಲೆ ಸೇಡು ತೀರಿಸಿಕೊಂಡ ಘಟನೆ ಬಹುಶಃ ನಿಮಗೆ ನೆನಪಿರಬಹುದು. ಇದೀಗ ಜಿಬ್ರಾಲ್ಟರ್‌ನಲ್ಲಿ ಎರಡು ಕೋತಿಗಳು ಪ್ರವಾಸಿಗರ ಗುಂಪಿನ ಮೇಲೆ ದಾಳಿ ಮಾಡಿರೋ ಭಯಾನಕ ಘಟನೆ ನಡೆದಿದೆ.
ಈ ಭಯಾನಕ ಕ್ಷಣವನ್ನು ನಯರಾ ಅಲೋನ್ಸೊ ಸೋಸಾ ಅವರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದು, 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ವಿಡಿಯೋದಲ್ಲಿ, ಮಹಿಳೆಯ ಮೇಲೆ ಕೋತಿಯೊಂದು ದಾಳಿ ಮಾಡುತ್ತಿರುವುದನ್ನು ನೋಡಬಹುದು. ಕಪಿಯ ದಾಳಿಯಿಂದ ಬಿಡಿಸಿಕೊಳ್ಳಲು ಆಕೆ ಹೆಣಗಾಡುತ್ತಾಳೆ. ಇದನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆಗೆ ಸಹಾಯ ಮಾಡಲು ಮಧ್ಯಪ್ರವೇಶಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕೋತಿಯು ಆತನ ಮೇಲೆ ಅಟ್ಯಾಕ್ ಮಾಡಿದೆ.
ವ್ಯಕ್ತಿ ಮೇಲೆ ದಾಳಿ ಮಾಡುತ್ತಿದ್ದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆತನನ್ನು ಮತ್ತೊಂದು ಕೋತಿ ಅಡ್ಡಗಟ್ಟಿದೆ. ಇದರಿಂದ ಹೆದರಿದ ಆತ ಮೆಟ್ಟಿಲುಗಳಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ಓಡಿದ್ದಾನೆ. ಕೋತಿಯು ಕೂಡ ಆತನನ್ನು ಬೆನ್ನಟ್ಟಿದೆ. ಫೆಬ್ರವರಿ 22ರಂದು ಈ ಘಟನೆ ನಡೆದಿದೆ.
ವೈರಲ್ ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಆತ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ನಿಜವಾಗಿಯೂ ತಮಾಷೆಯಲ್ಲ, ಕೋತಿಗಳು ವ್ಯಕ್ತಿಗೆ ಸಾಕಷ್ಟು ಹಾನಿಯನ್ನುಂಟು ಮಾಡಬಹುದು, ಅದು ಕೊಲ್ಲಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.