ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಸಮುದ್ರ ತೀರ, ತೆಂಗು, ಒಳನಾಡು ಜಲಸಾರಿಗೆ, ತೇಲುವ ಹೋಟೆಲ್ ಹೀಗೆ ಹಲವು ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರವಾಸಿಗರನ್ನು ಸೆಳೆಯುವ ಸ್ಥಳಗಳಲ್ಲಿ ಕೋವಲಂ ಕೂಡ ಒಂದಾಗಿದೆ.
ಕೇರಳದ ರಾಜಧಾನಿ ತಿರುವನಂತಪುರಂನಿಂದ 16 ಕಿಲೋ ಮೀಟರ್ ದೂರದಲ್ಲಿ ಕೋವಲಂ ಇದೆ. ತಿರುವನಂತಪುರಂವರೆಗೆ ವಿಮಾನ, ರೈಲಿನ ಸೌಲಭ್ಯ ಇದೆ. ವೈವಿಧ್ಯತೆಗಳಿಂದ ಕೂಡಿರುವ ಕೋವಲಂ ಬೀಚ್ ನಲ್ಲಿ ಈಜು, ಸೂರ್ಯಸ್ನಾನ, ಗಿಡಮೂಲಿಕೆ ಮಸಾಜ್, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಹಾರಯಾನ ಮೊದಲಾದವು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರಾಕೃತಿಕ ಸೌಂದರ್ಯ ವೀಕ್ಷಣೆ ಮಾಡಬಹುದು, ಸಮುದ್ರ ತೀರದಲ್ಲಿನ ಆರೋಗ್ಯಧಾಮಗಳಿಗೆ ಭೇಟಿ ಕೊಡಬಹುದು.
ಇದರೊಂದಿಗೆ ಸ್ಥಳೀಯ ಪ್ರವಾಸಿ ಕೇಂದ್ರದಲ್ಲಿ ಮಾಹಿತಿ ಪಡೆದು ಹತ್ತಿರದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ತಿರುವನಂತಪುರಂನಲ್ಲಿ ವಸ್ತುಸಂಗ್ರಹಾಲಯ, ಆರ್ಟ್ ಗ್ಯಾಲರಿ, ಸಮೀಪದಲ್ಲಿ ಪದ್ಮನಾಭ ಸ್ವಾಮಿ ದೇವಾಲಯ, ಪೊನ್ಮುಡಿ ಗಿರಿಧಾಮ ನೋಡಬಹುದಾದ ಸ್ಥಳಗಳಾಗಿವೆ.