ಬೆಂಗಳೂರು: ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಉದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಳ್ಳುವ ವಿಡಿಯೋಗಳನ್ನು ಬಹುಶಃ ನೋಡಿರುತ್ತೀರಿ. ಇದೀಗ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಬೆನ್ನಲ್ಲಿ ನಡುಕ ಹುಟ್ಟಿಸುತ್ತದೆ.
ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವಿಡಿಯೋವನ್ನು ಕೈಗಾರಿಕೋದ್ಯಮಿ ಹಂಚಿಕೊಂಡಿದ್ದಾರೆ. ಸಫಾರಿಯಲ್ಲಿದ್ದ ಪ್ರವಾಸಿಗರ ಎಸ್ಯುವಿ ವಾಹನವನ್ನು ಹುಲಿಯೊಂದು ಬಲವಾಗಿ ಕಚ್ಚಿ ಎಳೆದಿದೆ. ಕಾರಿನಲ್ಲಿದ್ದ ಪ್ರವಾಸಿಗರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಹುಲಿ ಈ ರೀತಿ ಕಾರನ್ನು ಎಳೆಯುವುದನ್ನು ನೋಡಿದ ಪ್ರವಾಸಿಗರಿಗೆ ಸಣ್ಣದಾಗಿ ನಡುಕ ಹುಟ್ಟಿಸಿದಂತೂ ಸುಳ್ಳಲ್ಲ.
ಮಹೀಂದ್ರಾ ಎಸ್ಯುವಿ ಹಿಂಭಾಗದ ಬಂಪರ್ ಅನ್ನು ಹುಲಿಯು ಪದೇ ಪದೇ ಕಚ್ಚಿ ಎಳೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಒಂದು ಹಂತದಲ್ಲಿ ಬಂಪರ್ ಮೇಲೆ ಹಿಡಿತ ಸಾಧಿಸಿ ಕಾರನ್ನು ಹಿಂದಕ್ಕೆ ಎಳೆಯುವಲ್ಲಿ ಹುಲಿ ಯಶಸ್ವಿಯೂ ಆಗಿದೆ. ಇಡೀ ದೃಶ್ಯವನ್ನು ಮತ್ತೊಂದು ಕಾರಿನಲ್ಲಿ ಬಂದ ಪ್ರವಾಸಿಗರು ಚಿತ್ರೀಕರಿಸಿದ್ದಾರೆ.
ಮಹೀದ್ರಾ ಗ್ರೂಪ್ ಅಧ್ಯಕ್ಷರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಬಳಿಕ ಭಾರಿ ವೈರಲ್ ಆಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹುಲಿಯ ಶಕ್ತಿಯನ್ನು ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.