ಬೆಂಗಳೂರು: ಮಾಸಿಕ ಬಸ್ ಪಾಸ್ ಮತ್ತು ಗುರುತಿನ ಚೀಟಿ ನಿಯಮಗಳಲ್ಲಿ ಪರಿಷ್ಕರಣೆ ತರಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮುಂದಾಗಿದೆ.
ಜುಲೈ ತಿಂಗಳಿಂದ ವಿತರಿಸಲಾಗುವ ಮಾಸಿಕ ಬಸ್ ಪಾಸ್‌ಗಳು ವಿತರಣಾ ದಿನಾಂಕದಿಂದ ಒಂದು ತಿಂಗಳ ಅವಧಿಗೆ ಮಾನ್ಯವಾಗಿರಲಿದೆ. ಸದ್ಯ ಆಯಾ ಕ್ಯಾಲೆಂಡರ್ ತಿಂಗಳ ಪಾಸ್ ವಿತರಣಾ ವ್ಯವಸ್ಥೆ ಇದೆ. ಇದು ಒಂದು ವಾರದ ನಂತರ ಪಾಸ್ ಖರೀದಿಸುವ ಪ್ರಯಾಣಿಕರಿಗೆ ಪ್ರಯೋಜನಕಾರಿ ಅಲ್ಲ. ಬಿಎಂಟಿಸಿ ನೀಡುವ ಸಾಮಾನ್ಯ, ವಜ್ರ ಹಾಗೂ ವಾಯು ವಜ್ರ ಬಸ್ ಪಾಸ್‌ಗಳಿಗೂ ಈ ನಿಯಮ ಅನ್ವಯವಾಗಲಿದೆ.
ಗುರುತಿನ ಚೀಟಿಯ ನಿಯಮಗಳನ್ನೂ ಬಿಎಂಟಿಸಿ ಸಡಿಲಿಸಿದೆ. ಪ್ರಸ್ತುತ, ಮಾಸಿಕ ಪಾಸ್ ಖರೀದಿಸಲು ಬಯಸುವವರು ಬಿಎಂಟಿಸಿಯಿಂದ ಗುರುತಿನ ಚೀಟಿ ಪಡೆಯಬೇಕು.
“ಬಿಎಂಟಿಸಿಯು ಜುಲೈ 2022 ರಿಂದ ಜಾರಿಗೆ ಬರುವಂತೆ ಗುರುತಿನ ಕಾರ್ಡ್ ಆದೇಶವನ್ನು ಹಿಂಪಡೆಯುತ್ತದೆ, ಯಾವುದೇ ಸರ್ಕಾರಿ ಫೋಟೋ ಗುರುತಿನ ಚೀಟಿ (ಆಧಾರ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್) ಹೊಂದಿರುವ ಪ್ರಯಾಣಿಕರಿಗೆ ಅವಕಾಶ ನೀಡುತ್ತದೆ” ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.