ರೈಲು ಪ್ರಯಾಣ ಇರಲಿ, ಇಲ್ಲ ಬಸ್ ಪ್ರಯಾಣ ಇರಲಿ ಅಥವಾ ವಿಮಾನ ಪ್ರಯಾಣವೇ ಆಗಿರಲಿ. ದೂರ ಪ್ರಯಾಣ ಬೆಳೆಸಲು ಮನೆಯಿಂದ ಹೊರಡುವ ಮುನ್ನ ಪ್ರಯಾಣ ಸುಖಕರವಾಗಿರಲೆಂದು ಎಲ್ಲರೂ ಬಯಸುತ್ತಾರೆ.
ಫೇಸ್ಬುಕ್, ಟ್ವಿಟರ್ ಯುಗದಲ್ಲೂ ಜನ ದೇವರಿಗೊಂದು ನಮಸ್ಕಾರ ಮಾಡಿ ಮನೆ ಬಿಡ್ತಾರೆ. ವಿಭಿನ್ನ ಸಂಸ್ಕೃತಿಗಳ ಸಂಗಮವಾಗಿರುವ ಭಾರತದಲ್ಲಿ ಬೇರೆ ಬೇರೆ ಕಡೆ ಬೇರೆ ಬೇರೆ ಪದ್ಧತಿಗಳಿವೆ.
ಬಿಹಾರ : ಅಕ್ಕಿ ಮತ್ತು ದರ್ಬೆ
ಬಿಹಾರದ ಕೆಲ ಪ್ರದೇಶಗಳಲ್ಲಿ ದೂರ ಪ್ರಯಾಣ ಮಾಡುವವರು ಹಿರಿಯರಿಂದ ದರ್ಬೆ ಮತ್ತು ಅಕ್ಕಿ ಕಾಳುಗಳನ್ನು ಆಶೀರ್ವಾದವಾಗಿ ಪಡೆಯುತ್ತಾರೆ. ಇದನ್ನು ಜೊತೆಯಲ್ಲಿಟ್ಟುಕೊಂಡು ಪ್ರಯಾಣ ಬೆಳೆಸುತ್ತಾರೆ.
ದಕ್ಷಿಣ ಭಾರತ : ಬೇವಿನ ಎಲೆ
ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ದೂರ ಪ್ರಯಾಣ ಮಾಡುವ ಜನರು ಜೇಬಿನಲ್ಲಿ ಬೇವಿನ ಕೆಲ ಎಲೆಗಳನ್ನು ಇಟ್ಟುಕೊಂಡು ಹೋಗುತ್ತಾರೆ. ಹೀಗೆ ಮಾಡುವುದರಿಂದ ಪ್ರಯಾಣ ಸುಖಕರವಾಗಿರುತ್ತದೆ, ಯಾವುದೇ ಅಡ್ಡಿ ಬರುವುದಿಲ್ಲ ಎಂಬುದು ಅವರ ನಂಬಿಕೆ.
ಈಶಾನ್ಯ ರಾಜ್ಯ : ಮೀನು
ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳ ಜನರು ಮನೆಯಿಂದ ಹೊರಡುವ ಮುನ್ನ ಮೀನಿನ ದರ್ಶನ ಮಾಡಿ ಹೋಗುತ್ತಾರೆ. ದಾರಿಯಲ್ಲಿ ಯಾವುದೇ ಅಡ್ಡಿ ಆತಂಕ ಬರದಿರಲಿ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ.
ಉತ್ತರ ಪ್ರದೇಶ : ಸಿಹಿ ಮೊಸರು ಅಥವಾ ಸಕ್ಕರೆ
ಉತ್ತರ ಪ್ರದೇಶದ ಜನರು ಮನೆ ಬಿಡುವ ಮುನ್ನ ಸಿಹಿ ಮೊಸರು ಅಥವಾ ಸಕ್ಕರೆಯನ್ನು ತಿನ್ನುತ್ತಾರೆ. ಹೀಗೆ ಮಾಡುವುದರಿಂದ ಪ್ರಯಾಣ ಸುಖಕರ ಹಾಗೂ ಸಂತೋಷದಾಯಕವಾಗಿರುತ್ತದೆ ಎಂಬುದು ಅವರ ನಂಬಿಕೆ.