ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಿದ್ದು, ಕೆಂಪೇಗೌಡ ಪ್ರತಿಮೆ ಅನಾವರಣ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರ ಈ ಭೇಟಿಗೂ ಮುನ್ನ ಅಂದರೆ ನವೆಂಬರ್ 9 ರಂದು ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ಎಚ್ಎಎಲ್ ವಿಮಾನ ನಿಲ್ದಾಣ ಪ್ರವೇಶಿಸಿದ್ದ ಎಂಬ ಸಂಗತಿ ಈಗ ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಅಸ್ಸಾಂನ 36 ವರ್ಷದ ಮುಕುಂದ ಖೌಂಡ್ ಬಂಧನಕ್ಕೊಳಗಾದವನಾಗಿದ್ದು ಈತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಈತ ತನ್ನ ಪತ್ನಿಯೊಂದಿಗೆ ಯಮನೂರಿನಲ್ಲಿ ವಾಸವಾಗಿದ್ದು, ಪತ್ನಿ ಜೊತೆ ಜಗಳವಾಡಿದ ಬಳಿಕ ಮದ್ಯ ಸೇವಿಸಿ ವಿಮಾನ ನಿಲ್ದಾಣದಲ್ಲಿದ್ದ ಕಬ್ಬಿಣ ಕಳವು ಮಾಡಲು ಗೋಡೆ ಏರಿ ಒಳಗೆ ಪ್ರವೇಶಿಸಿದ್ದ ಎನ್ನಲಾಗಿದೆ.
ಮಧ್ಯರಾತ್ರಿ ಈತ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಶ್ವಾನದಳದ ಸಿಬ್ಬಂದಿ ಆತನನ್ನು ಗುರುತಿಸಿದ್ದು, ಬಳಿಕ ಮುಕುಂದನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಆತ ಈ ಹಿಂದೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬುದು ಖಚಿತಪಟ್ಟಿದೆ. ಆದರೆ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದರೂ ಸಹ ವಿಮಾನ ನಿಲ್ದಾಣದೊಳಗೆ ಆತ ಪ್ರವೇಶಿಸಿರುವ ಕಾರಣ ಭದ್ರತಾ ವೈಫಲ್ಯವಾಗಿತ್ತಾ ಎಂಬ ಪ್ರಶ್ನೆ ಈಗ ಮೂಡಿದೆ.