ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೆಕ್ಕವಿಲ್ಲದಷ್ಟು ಉಡುಗೊರೆಗಳು ಬರುತ್ತಲೇ ಇರುತ್ತವೆ. ಕ್ರೀಡಾಪಟುಗಳು, ರಾಜಕಾರಣಿಗಳು, ಸಮಾಜದ ವಿವಿಧ ಕ್ಷೇತ್ರಗಳ ಪ್ರಭಾವಿಗಳು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ 1,200 ಕ್ಕೂ ಹೆಚ್ಚು ವಸ್ತುಗಳನ್ನು ಸೆಪ್ಟೆಂಬರ್ 17 ರಿಂದ ಹರಾಜು ಮಾಡಲು ನಿರ್ಧರಿಸಲಾಗಿದೆ. ಹರಾಜಿನಿಂದ ಸಂಗ್ರಹವಾದ ಆದಾಯವನ್ನು ʼನಮಾಮಿ ಗಂಗಾʼ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ.
pmmementos.gov.in ವೆಬ್ ಪೋರ್ಟಲ್ ಮೂಲಕ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಸಪ್ಟೆಂಬರ್ 17ಕ್ಕೆ ಆರಂಭವಾಗಲಿರುವ ಈ ಪ್ರಕ್ರಿಯೆ ಅಕ್ಟೋಬರ್ 2 ರಂದು ಮುಕ್ತಾಯಗೊಳ್ಳಲಿದೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಉಡುಗೊರೆಗಳನ್ನು ಪ್ರದರ್ಶಿಸಲಿದೆ. ಹರಾಜಿನ ಬಗ್ಗೆ ಸಂಸ್ಥೆಯ ಮಹಾ ನಿರ್ದೇಶಕ ಅದ್ವೈತ ಗಡನಾಯಕ್ ಮಾಹಿತಿ ನೀಡಿದ್ದಾರೆ.
ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ, ಜನಸಾಮಾನ್ಯರು ಮತ್ತು ವಿವಿಧ ಗಣ್ಯರು ನೀಡಿರುವ ವಿಶೇಷ ಉಡುಗೊರೆಗಳನ್ನು ಹರಾಜು ಮಾಡಲಾಗುವುದು ಅಂತಾ ತಿಳಿಸಿದ್ದಾರೆ. ಉಡುಗೊರೆಗಳ ಮೂಲ ಬೆಲೆ 100 ರೂಪಾಯಿಯಿಂದ ಪ್ರಾರಂಭವಾಗಿ 10 ಲಕ್ಷ ರೂಪಾಯಿವರೆಗೂ ಇದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಡುಗೊರೆಯಾಗಿ ನೀಡಿದ ರಾಣಿ ಕಮಲಾಪತಿ ಪ್ರತಿಮೆ, ಹನುಮಾನ್ ವಿಗ್ರಹ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಉಡುಗೊರೆಯಾಗಿ ನೀಡಿದ ಸೂರ್ಯ ವರ್ಣಚಿತ್ರ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಉಡುಗೊರೆಯಾಗಿ ನೀಡಿದ ‘ತ್ರಿಶೂಲ್’ ಸಹ ಹರಾಜಾಗಲಿವೆ.
ಎನ್ಸಿಪಿ ನಾಯಕ ಅಜಿತ್ ಪವಾರ್ ಉಡುಗೊರೆಯಾಗಿ ನೀಡಿದ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ದೇವಿಯ ಪ್ರತಿಮೆ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಉಡುಗೊರೆಯಾಗಿ ನೀಡಿದ ವೆಂಕಟೇಶ್ವರನ ವಾಲ್ ಹ್ಯಾಂಗಿಂಗ್ ಅನ್ನು ಸಹ ಆಸಕ್ತರು ಕೊಂಡುಕೊಳ್ಳಬಹುದು. ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳ ಇ-ಹರಾಜಿನ ನಾಲ್ಕನೇ ಆವೃತ್ತಿ ಇದು.
ಪದಕ ವಿಜೇತ ಆಟಗಾರರು ಸಹಿ ಮಾಡಿದ ಟಿ-ಶರ್ಟ್ಗಳು, ಬಾಕ್ಸಿಂಗ್ ಕೈಗವಸುಗಳು, ಜಾವಲಿನ್ ಮತ್ತು ರಾಕೆಟ್ಗಳಂತಹ ಕ್ರೀಡಾ ವಸ್ತುಗಳ ವಿಶೇಷ ಸಂಗ್ರಹವೂ ಲಭ್ಯವಿದೆ. ಸೊಗಸಾದ ವರ್ಣಚಿತ್ರಗಳು, ಶಿಲ್ಪಗಳು, ಕರಕುಶಲ ವಸ್ತುಗಳು ಮತ್ತು ಜಾನಪದ ಕಲಾಕೃತಿಗಳು ಸಹ ಹರಾಜಾಗಲಿವೆ. ಇದಲ್ಲದೆ ಸಾಂಪ್ರದಾಯಿಕ ಅಂಗವಸ್ತ್ರಗಳು, ಶಾಲುಗಳು, ಹೆಡ್ ಗೇರ್ಗಳು, ಖಡ್ಗಗಳು, ಕತ್ತಿಗಳು ಸಹ ಹರಾಜಿಗಿವೆ. ಆಸಕ್ತಿದಾಯಕ ಇತರ ಸ್ಮರಣಿಕೆಗಳೆಂದರೆ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರದ ಕಲಾಕೃತಿ ಮತ್ತು ವಾರಣಾಸಿಯ ಕಾಶಿ-ವಿಶ್ವನಾಥ ದೇವಾಲಯದ ಪ್ರತಿಕೃತಿಗಳು ಮತ್ತು ಮಾದರಿಗಳು.