ರಷ್ಯಾ – ಉಕ್ರೇನ್ ನಡುವಿನ ಯುದ್ಧದ ನಡುವೆಯೇ ಕೇಂದ್ರ ಸರ್ಕಾರ ಉಕ್ರೇನ್ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಸಂಬಂಧ ಭಾನುವಾರ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧ್ಯಾ, ಕಿರಣ್ ರಿಜಿಜು ಹಾಗೂ ನಿವೃತ್ತ ಜನರಲ್ ವಿ ಕೆ ಸಿಂಗ್ ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಜೊತೆ ಸಂಪರ್ಕ ಸಾಧಿಸಲು ಉಕ್ರೇನ್ನ ಸ್ಥಳೀಯ ದೇಶಗಳಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಕಳೆದ 24 ಗಂಟೆಗಳಲ್ಲಿ ಉಕ್ರೇನ್ನ ವಿಚಾರವಾಗಿ ಪ್ರಧಾನಿ ಮೋದಿ ಕೈಗೊಂಡ ಎರಡನೇ ಉನ್ನತ ಮಟ್ಟದ ಸಭೆ ಇದಾಗಿದೆ. ಭಾನುವಾರದಂದು ಪ್ರಧಾನಿ ಮೋದಿ ಕೇಂದ್ರ ವಿದೇಶಾಂಗ ಸಚಿವ ಡಾ. ಜೈಶಂಕರ್ ಹಾಗೂ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿದ್ದರು.
ರಷ್ಯಾ ಉಕ್ರೇನ್ನ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದ ಬಳಿಕ ಭಾರತವು ಯುದ್ಧ ಸ್ಥಳದಲ್ಲಿ ಸಿಲುಕಿರುವ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಅಲ್ಲಿಂದ ತಾಯ್ನಾಡಿಗೆ ಕರೆತರುವ ಪ್ರಯತ್ನದಲ್ಲಿದೆ. ಆಪರೇಷನ್ ಗಂಗಾದ ಅಡಿಯಲ್ಲಿ ಈಗಾಗಲೇ 900ಕ್ಕೂ ಅಧಿಕ ನಾಗರಿಕರು ಉಕ್ರೇನ್ನಿಂದ ದೇಶಕ್ಕೆ ಮರಳಿದ್ದಾರೆ. ಆದರೆ ಇನ್ನೂ 15 ಸಾವಿರ ಮಂದಿ ಭಾರತೀಯರು ಉಕ್ರೇನ್ನಲ್ಲಿಯೇ ಸಿಲುಕಿದ್ದಾರೆ ಎನ್ನಲಾಗಿದೆ.