ಪ್ರಧಾನಿ ನರೇಂದ್ರ ಮೋದಿಯವರ ಜರ್ಮನಿ ಪ್ರವಾಸದಲ್ಲಿ ದೇಶಭಕ್ತಿ ಗೀತೆ ಹಾಡುವ ಮೂಲಕ ಅವರನ್ನು ಬಾಲಕನೊಬ್ಬ ಮೆಚ್ಚಿಸಿದ್ದ. ಇದೀಗ ಬಾಲಕನ ತಂದೆ, ಹಾಸ್ಯನಟ ಕುನಾಲ್ ಕಮ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ಮಗನನ್ನು ನಿಮ್ಮ ರಾಜಕೀಯದಿಂದ ದೂರವಿಡಿ ಅಂತಾ ಕಿಡಿಕಾರಿದ್ದಾರೆ.
ಮಗುವಿನೊಂದಿಗೆ ಪ್ರಧಾನಿಯವರ ಸಂವಾದದ ವಿಡಿಯೋವನ್ನು ಕುನಾಲ್ ಕಮ್ರಾ ಹಂಚಿಕೊಂಡಿದ್ದರು. ಆದರೆ, ಅವರು ಹುಡುಗ ಹಾಡಿರುವ ಹಾಡನ್ನು ಬದಲಾಯಿಸಿದ್ದಾರೆ. ಎಡಿಟ್ ಮಾಡಲಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಬಾಲಕನ ತಂದೆ ಸಿಟ್ಟಾಗಲು ಕಾರಣವಾಗಿದೆ.
ಕಮ್ರಾ ಅವರನ್ನು ಕಸ ಎಂದು ಕರೆದು, ಮಗುವಿನ ತಂದೆ ಗಣೇಶ್, ಟ್ವೀಟ್ ಮಾಡಿದ್ದಾರೆ. ಅವನು ನನ್ನ 7 ವರ್ಷದ ಮಗ, ತನ್ನ ಪ್ರೀತಿಯ ಮಾತೃಭೂಮಿಗಾಗಿ ಈ ಹಾಡನ್ನು ಹಾಡಲು ಬಯಸಿದ್ದನು. ಅವನು ಇನ್ನೂ ಚಿಕ್ಕವನಾಗಿದ್ದರೂ ಖಂಡಿತವಾಗಿಯೂ ಅವನು ನಿಮಗಿಂತ ಹೆಚ್ಚಾಗಿ ತನ್ನ ದೇಶವನ್ನು ಪ್ರೀತಿಸುತ್ತಾನೆ. ನಿಮ್ಮ ಹೊಲಸು ರಾಜಕೀಯದಿಂದ ತನ್ನ ಮಗನನ್ನು ದೂರವಿಡಿ. ನಿಮ್ಮ ಕಳಪೆ ಹಾಸ್ಯದ ಮೇಲೆ ನೀವು ಕೆಲಸ ಮಾಡಲು ಪ್ರಯತ್ನಿಸಿ ಅಂತಾ ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಸೋಮವಾರ ಜರ್ಮನಿಗೆ ಪ್ರಧಾನಿ ಭೇಟಿ ನೀಡಿದ ಸ್ವಲ್ಪ ಸಮಯದ ನಂತರ ಮೂಲ ವಿಡಿಯೋ ವೈರಲ್ ಆಗಿತ್ತು. ಹಾಡಿಗಾಗಿ ಪಿಎಂ ಮೋದಿ ಬಾಲಕನನ್ನು ಹೊಗಳಿದ್ದರು. ಉಭಯ ದೇಶಗಳ (ಭಾರತ ಮತ್ತು ಜರ್ಮನಿ) ಉನ್ನತ ಸಿಇಒಗಳೊಂದಿಗೆ ಸಂವಾದ ನಡೆಸಲು ಪ್ರಧಾನಿ ಮೋದಿ ಜರ್ಮನಿ ಪ್ರವಾಸ ಕೈಗೊಂಡಿದ್ದರು.