ಕಾಂಗ್ರೆಸ್ ಪಕ್ಷ ಹಾಗೂ ಜವಹರಲಾಲ್ ನೆಹರೂ ಕುರಿತಂತೆ ಪ್ರಧಾನಿ ಮೋದಿ ನೀಡಿರುವ ಹೇಳಿಕೆಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಪ್ರಧಾನಿ ಮೋದಿ ಇನ್ನೂ ಭೂತಕಾಲದಲ್ಲಿಯೇ ಇದ್ದಾರೆ ಎಂದು ತಿಳಿದು ನನಗೆ ಆಶ್ಚರ್ಯವಾಯಿತು ಎಂದು ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿರುವಾಗಲೇ ಪ್ರಧಾನಿ ಮೋದಿ ಏಕೆ ಇನ್ನು ಹಿಂದಿನ ಘಟನೆಗಳಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ನಮಗೆ ಆಶ್ಚರ್ಯವಾಗಿದೆ ಎಂದು ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದರು.
ನರೇಂದ್ರ ಮೋದಿ ಕಳೆದ 7 ವರ್ಷಗಳಿಂದ ದೇಶದ ಪ್ರಧಾನಿಯಾಗಿದ್ದಾರೆ. ಇದರ ಬಗ್ಗೆ ಏಕೆ ಅವರು ಮಾತನಾಡುವುದಿಲ್ಲ..? ದೇಶದ ಭವಿಷ್ಯದ ಬಗ್ಗೆ ಪ್ರಧಾನಿ ಏಕೆ ಮಾತನಾಡುವುದಿಲ್ಲ..? ಈ ಏಳು ವರ್ಷಗಳಲ್ಲಿ ಅವರು ದೇಶದಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದಾರೆ ಎಂಬುದರ ಬಗ್ಗೆ ಏಕೆ ಮಾತನಾಡೋದಿಲ್ಲ..? ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಬಡತನ ರೇಖೆಗಿಂತ ಮೇಲೆ ಇದ್ದವರು ಬಿಜೆಪಿ ಅಧಿಕಾರಾವಧಿಯಲ್ಲಿ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ಇದೆಲ್ಲದರ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ನೆಹರೂ ಈ ದೇಶಕ್ಕೆ ಏನೆಲ್ಲ ಕೊಡುಗೆ ನೀಡಿದ್ದಾರೆ ಎಂಬುದು ದೇಶದ ಜನತೆಗೆ ತಿಳಿದಿದೆ. ನೀವು ಇತಿಹಾಸವನ್ನು ಅಳಿಸಲು ಯತ್ನಿಸುವುದಾದರೆ ಯತ್ನಿಸಿ. ಆದರೆ ಸತ್ಯ ಒಂದಲ್ಲ ಒಂದು ದಿನ ಹೊರಬಂದೇ ಬರುತ್ತದೆ ಎಂದು ಗುಡುಗಿದರು.
ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ನೀವೆಲ್ಲ ನಾನು ನೆಹರೂ ಹೆಸರನ್ನು ಹೆಚ್ಚಾಗಿ ತೆಗೆದುಕೊಳ್ಳುವುದಿಲ್ಲ ಎಂದು ದೂರುತ್ತಲೇ ಇರುತ್ತೀರಿ. ಇಂದು ನಾನು ಕೇವಲ ನೆಹರೂ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂಜಾಯ್ ಎಂದು ಹೇಳಿದ್ದರು.