ತಮ್ಮ ಹೊಸ ಪುಸ್ತಕದಲ್ಲಿ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ಪ್ರಧಾನಿ ಮೋದಿಯನ್ನು ಡಾ.ಬಿ.ಆರ್. ಅಂಬೇಡ್ಕರ್ಗೆ ಹೋಲಿಸಿದ್ದಾರೆ. ಹೊಸ ಪುಸ್ತಕದ ಮುನ್ನುಡಿಯಲ್ಲಿ, ಅವರಿಬ್ಬರೂ ಪ್ರಕಾಶಿಸುವ ವ್ಯಕ್ತಿತ್ವಗಳು ಎಂದು ತಿಳಿಸಿದ್ದಾರೆ.
ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಪ್ರಕಟಿಸಿದ ಅಂಬೇಡ್ಕರ್ ಮತ್ತು ಮೋದಿ: ರಿಫಾರ್ಮರ್ಸ್ ಐಡಿಯಾಸ್, ಪರ್ಫಾಮರ್ಸ್ ಇಂಪ್ಲಿಮೆಂಟೇಶನ್ ಎಂಬ ಪುಸ್ತಕವನ್ನು ಏಪ್ರಿಲ್ 14ರಂದು ಅಂಬೇಡ್ಕರ್ ಅವರ ಜನ್ಮದಿನದಂದು ಬಿಡುಗಡೆ ಮಾಡಲಾಯಿತು.
ಸ್ವತಃ ದಲಿತರಾಗಿರುವ ಇಳಯರಾಜ ಅವರು ತಮ್ಮ ಮುನ್ನುಡಿಯಲ್ಲಿ, ಭಾರತೀಯ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಮತ್ತು ಭಾರತದ ಪ್ರಧಾನಮಂತ್ರಿ ನಡುವೆ ಅನೇಕ ಸಾಮ್ಯತೆಗಳಿವೆ ಎಂದು ಹೇಳಿದ್ದಾರೆ. ಇಬ್ಬರೂ ಬಡತನ ಮತ್ತು ಉಸಿರುಗಟ್ಟಿಸುವ ಸಮಾಜವನ್ನು ಹತ್ತಿರದಿಂದ ನೋಡಿದ್ದಾರೆ. ಹಾಗೂ ಅವುಗಳನ್ನು ಕೆಡವಲು ಕೆಲಸ ಮಾಡಿದ್ದಾರೆ ಎಂದು ಸಂಗೀತ ಮಾಂತ್ರಿಕ ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ.
ಸಾಮಾಜಿಕ ಪರಿವರ್ತನೆಗೆ ಕಾರಣವಾದ ಐತಿಹಾಸಿಕ ಬೇಟಿ ಬಚಾವೋ ಬೇಟಿ ಪಢಾವೋ ಆಂದೋಲನ, ತ್ರಿವಳಿ ತಲಾಖ್ ನಿಷೇಧ ಮತ್ತು ಲಿಂಗ ಅನುಪಾತ ಹೆಚ್ಚಳದಂತಹ ಮಹಿಳಾ ಪರ ಕಾನೂನುಗಳನ್ನು ಡಾ.ಬಿ.ಆರ್. ಅಂಬೇಡ್ಕರರು ಹೆಮ್ಮೆ ಪಡುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
ಮೋದಿಯನ್ನು ಅಂಬೇಡ್ಕರ್ ಅವರೊಂದಿಗೆ ಹೋಲಿಸಿದ್ದಕ್ಕಾಗಿ ಡಿಎಂಕೆ ಮತ್ತು ಮಿತ್ರಪಕ್ಷಗಳು ಇಳಯರಾಜರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಳಯರಾಜರ ಮುನ್ನುಡಿಗೆ ತಮಿಳುನಾಡು ಬಿಜೆಪಿ ಘಟಕ ಚಪ್ಪಾಳೆ ತಟ್ಟಿದ್ದು, ಅವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಎಂದು ಪ್ರತಿಪಾದಿಸಿದೆ.