ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ತಡೆವೊಡ್ಡಲು ಮುಂದಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ರಾಷ್ಟ್ರ ರಾಜಕಾರಣಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಇದಕ್ಕೆ ಪೂರ್ವಭಾವಿ ಎಂಬಂತೆ ಈಗಾಗಲೇ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಎನ್.ಸಿ.ಪಿ. ನಾಯಕ ಶರದ್ ಪವಾರ್ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿದ್ದಾರೆ.
ಇದೀಗ ತಮ್ಮ ರಾಷ್ಟ್ರಮಟ್ಟದ ಪಕ್ಷವನ್ನು ಲೋಕಾರ್ಪಣೆಗೊಳಿಸಲು ಕೆ. ಚಂದ್ರಶೇಖರ ರಾವ್ ಸಿದ್ಧತೆ ನಡೆಸಿದ್ದು ವಿಜಯದಶಮಿ ದಿನವಾದ ಅಕ್ಟೋಬರ್ 5ರಂದು ಇದಕ್ಕೆ ಚಾಲನೆ ಸಿಗಲಿದೆ ಎಂದು ತಿಳಿದುಬಂದಿದೆ. ನೂತನ ಪಕ್ಷಕ್ಕೆ ಭಾರತೀಯ ರಾಷ್ಟ್ರ ಸಮಿತಿ ಎಂದು ಹೆಸರಿಡಲಾಗಿದ್ದು, ಇದು ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದೊಂದಿಗೆ ಸಂಪೂರ್ಣವಾಗಿ ವಿಲೀನಗೊಳ್ಳಲಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕವೂ ಸೇರಿದಂತೆ 150 ರಿಂದ 160 ಲೋಕಸಭಾ ಕ್ಷೇತ್ರಗಳಲ್ಲಿ ಭಾರತೀಯ ರಾಷ್ಟ್ರ ಸಮಿತಿ ಕಣಕ್ಕಿಳಿಯಲಿದ್ದು, ಇದಕ್ಕಾಗಿ ಕ್ಷೇತ್ರಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ನೂತನ ರಾಷ್ಟ್ರ ಮಟ್ಟದ ಪಕ್ಷಕ್ಕೆ ಚಾಲನೆ ನೀಡಿದ ಬಳಿಕ ನವದೆಹಲಿ ಅಥವಾ ಲಕ್ನೋ ದಂತಹ ಹಿಂದಿ ಭಾಷಿಕ ಪ್ರದೇಶದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿ ಆ ಮೂಲಕ ದೇಶಕ್ಕಾಗಿ ತಾವು ಹೊಂದಿರುವ ಕನಸುಗಳನ್ನು ಬಿಚ್ಚಿಡಲು ಕೆ. ಚಂದ್ರಶೇಖರ ರಾವ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.