ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ವೇಳೆ ಅವರು ಸಂಚರಿಸುವ ಮಾರ್ಗಕ್ಕಾಗಿಯೇ ನಿರ್ಮಾಣವಾಗಿದ್ದ ರಸ್ತೆ ಕಾಮಗಾರಿ ಪ್ರಧಾನಿ ವಾಪಸ್ ತೆರಳುತ್ತಿದ್ದಂತೆಯೇ ರಸ್ತೆಯಲ್ಲಿನ ಡಾಂಬರೀಕರಣ ಕಿತ್ತು ಬಂದಿದೆ. ಬಿಬಿಎಂಪಿ ಕಳಪೆ ರಸ್ತೆ ಕಾಮಗಾರಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
23 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ರಸ್ತೆ ಕಾಮಗಾರಿ ಒಂದೇ ದಿನದಲ್ಲಿ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ.
ಸ್ಥಳೀಯ ಇಇ, ಎಇಇ, ಎಇ ಮೂವರು ಬಿಬಿಎಂಪಿ ಅಧಿಕಾರಿಗಳಿಗೆ ಮುಖ್ಯ ಅಭಿಯಂತರ ಪ್ರಹ್ಲಾದ್ ಶೋಕಾಸ್ ನೋಟೀಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಯಿಂದ ಮರಿಯಪ್ಪನಪಾಳ್ಯದ ಕಡೆ ಹೋಗುವ ರಸ್ತೆಯಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ಮೂರೇ ದಿನಕ್ಕೆ ಡಾಂಬರೀಕರಣ ಕಿತ್ತು ಬಂದಿದೆ. ಪ್ರಧಾನಿ ಮೋದಿ ಭೇಟಿ ನೀಡಿದ್ದ ಅಂಬೆಡ್ಕರ್ ಎಕನಾಮಿಕ್ಸ್ ಕಾಲೇಜಿನ ರಸ್ತೆಯಲ್ಲಿಯೂ ಬೃಹತ್ ಗುಂಡಿಗಳು ಬಿದ್ದಿವೆ. ಬಿಬಿಎಂಪಿ ಕಳಪೆ ಕಾಮಗಾರಿ ಮುಖವಾಡ ಬಟಾಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ.