ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರು ನಗರದಲ್ಲಿ ರೋಡ್ ಶೋ ನಡೆಸುವ ವೇಳೆ ಚಿಕ್ಕ ಗಡಿಯಾರದ ಬಳಿ ಮೊಬೈಲ್ ಒಂದು ಅವರತ್ತ ತೂರಿ ಬಂದಿತ್ತು. ಇದನ್ನು ಗಮನಿಸಿದ್ದ ನರೇಂದ್ರ ಮೋದಿಯವರು ಭದ್ರತಾ ಸಿಬ್ಬಂದಿಗೆ ಅದನ್ನು ತೆಗೆದುಕೊಂಡು ವಾರಸುದಾರರಿಗೆ ಹಿಂದಿರುಗಿಸುವಂತೆ ಸೂಚಿಸಿದ್ದರು.
ಅದರಂತೆ ಮೊಬೈಲ್ ತೆಗೆದುಕೊಂಡ ಪೊಲೀಸರು ಅದರ ವಾರಸುದಾರರಿಗೆ ಹಿಂದಿರುಗಿಸಿದ್ದರು. ಆದರೆ ಯಾವಾಗ ಈ ವಿಷಯ ಮಾಧ್ಯಮಗಳಲ್ಲಿ ಭದ್ರತಾ ಲೋಪ ಎಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತೋ ಆಗ ಪೇಚಿಗೆ ಸಿಲುಕಿದ ಪೊಲೀಸರು ಮೊಬೈಲ್ ತೆಗೆದುಕೊಂಡ ವ್ಯಕ್ತಿಯ ಹಿನ್ನೆಲೆ ಪರಿಶೀಲಿಸಲು ಮುಂದಾಗಿದ್ದರು.
ಅದರಂತೆ ಮೊಬೈಲ್ ಮಾಲೀಕರನ್ನು ಠಾಣೆಗೆ ಕರೆಸಿಕೊಂಡ ವೇಳೆ ಯೋಗ ಶಿಕ್ಷಕ ನಂಜುಂಡೇ ರಾಜ್ ಅರಸ್ ಎಂಬುದು ತಿಳಿದು ಬಂದಿದೆ. ಬಿಜೆಪಿಯ ಶಾರದಾದೇವಿ ನಗರದ ವಾರ್ಡ್ ಅಧ್ಯಕ್ಷರು ಆಗಿರುವ ಇವರು ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದಾರೆ.
ಮೋದಿಯವರ ರೋಡ್ ಶೋ ವೇಳೆ ವಾಹನ ಪಕ್ಕದಲ್ಲಿ ಜೈಕಾರ ಹಾಕಿಕೊಂಡು ಹೋಗುತ್ತಿದ್ದ ಇವರು, ತಮ್ಮ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಲು ಹೋದಾಗ ಹಿಂದಿನಿಂದ ಹೂ ಎಸೆಯುತ್ತಿದ್ದವರ ಕೈ ತಾಗಿದೆ. ಇದರ ರಭಸಕ್ಕೆ ಮೊಬೈಲ್ ಮೋದಿಯವರತ್ತ ತೂರಿ ಹೋಗಿದ್ದು ಸತ್ಯ ಸಂಗತಿ ಅರಿತ ಬಳಿಕ ಪೊಲೀಸರು ನಿರಾಳರಾಗಿದ್ದಾರೆ.