ಸುಂದರವಾಗಿ ಕಾಣೋದಿಕ್ಕೆ ಏನೆಲ್ಲ ಕಸರತ್ತು ಮಾಡ್ತೇವೆ. ವಯಸ್ಸನ್ನು ಮುಚ್ಚಿಡಲು ಮೇಕಪ್ ಮೇಲೆ ಮೇಕಪ್ ಮಾಡ್ತೇವೆ. ಹಗಲಿನಲ್ಲಿ ನಮ್ಮ ಸೌಂದರ್ಯದ ಬಗ್ಗೆ ಅತಿ ಕಾಳಜಿ ವಹಿಸುವ ನಾವು ರಾತ್ರಿ ಮಾತ್ರ ಇದನ್ನು ಮರೆತು ಬಿಡ್ತೇವೆ. ರಾತ್ರಿ ಚರ್ಮದ ಬಗ್ಗೆ ನೀವು ಅಲಕ್ಷ ಮಾಡಿದ್ದರೆ ಈಗಲಾದ್ರೂ ಎಚ್ಚೆತ್ತುಕೊಳ್ಳಿ.
ತಜ್ಞರ ಪ್ರಕಾರ ರಾತ್ರಿ ಚರ್ಮಕ್ಕೆ ಆರೈಕೆ ಅಗತ್ಯ. ನಿರ್ಲಕ್ಷಿಸಿದ್ರೆ ಅಪಾಯವುಂಟಾಗಬಹುದು. ಹಾಗಾಗಿ ರಾತ್ರಿ ಮಲಗುವ ಮುನ್ನ ಕೆಲವೊಂದು ರೂಢಿ ಬೆಳೆಸಿಕೊಂಡು ನಿಮ್ಮ ಚರ್ಮವನ್ನು ಕಾಪಾಡಿಕೊಳ್ಳಿ.
ಅದೆಷ್ಟೇ ಒತ್ತಡವಿರಲಿ, ನಿದ್ದೆ ಬಂದಿರಲಿ ಯಾವುದೇ ಕಾರಣಕ್ಕೂ ಮೇಕಪ್ ಹಾಕಿಯೇ ಮಲಗಬೇಡಿ. ಹಾಸಿಗೆಗೆ ಹೋಗುವ ಮುನ್ನ ಮೇಕಪ್ ತೆಗೆಯಲು ಮರೆಯಬೇಡಿ. ಮೇಕಪ್ ನಲ್ಲಿರುವ ರಾಸಾಯನಿಕ ವಸ್ತುಗಳು ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚಿಬಿಡುತ್ತವೆ. ಇದರಿಂದಾಗಿ ಚರ್ಮ ಹೊಳಪು ಕಳೆದುಕೊಳ್ಳುತ್ತದೆ.
ಚರ್ಮ ಒಣಗಿದಂತಾಗಿದ್ದರೆ ಚಿಂತೆ ಬೇಡ. ಮಲಗುವ ಮುನ್ನ ನಿಮ್ಮ ಸ್ವಚ್ಛವಾದ ಕೈಗಳಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಇದರಿಂದ ರಕ್ತ ಪರಿಚಲನೆ ಹೆಚ್ಚಾಗಿ ನಿರ್ಜೀವವಾಗಿದ್ದ ಚರ್ಮ ಹೊಳೆಯಲಾರಂಭಿಸುತ್ತದೆ.
ಹಾಸಿಗೆಗೆ ಹೋಗುವ ಮುನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಉತ್ತಮ. ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಸ್ನಾನ ಮಾಡುವುದನ್ನು ರೂಢಿ ಮಾಡಿಕೊಳ್ಳಿ. ಉಪ್ಪಿಗೆ ಸೋಂಕನ್ನು ಹೊಡೆದೋಡಿಸುವ ಶಕ್ತಿ ಇದೆ.
ನಿಮ್ಮ ಕೂದಲು ಉದ್ದವಾಗಿದ್ದರೆ ಮಲಗುವ ಮೊದಲು ಕೂದಲನ್ನು ಬಾಚಿಕೊಳ್ಳಿ. ಹೀಗೆ ಮಾಡುವುದರಿಂದ ರಕ್ತ ಪರಿಚಲನೆ ಸರಿಯಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ.
ದಿನವಿಡಿ ಮಾಡುವ ದಣಿವು ಕಣ್ಣಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕಣ್ಣುಗಳನ್ನು ರಾತ್ರಿ ನೀರಿನಲ್ಲಿ ತೊಳೆದು ಮಲಗಬೇಕು. ಆಗ ಕಣ್ಣು ಕೆಳಗೆ ಕಾಣಿಸಿಕೊಳ್ಳುವ ಕಪ್ಪು ಕಲೆಯಿಂದ ಮುಕ್ತಿ ಪಡೆಯಬಹುದಾಗಿದೆ.