ಪ್ರೀತಿ, ವಿಶ್ವಾಸ, ನಂಬಿಕೆ ಮೇಲೆ ದಾಂಪತ್ಯ ನಿಂತಿರುತ್ತದೆ. ಹಾಗಂತ ಪತಿ-ಪತ್ನಿಯ ಎಲ್ಲ ವಿಷ್ಯ ಪರಸ್ಪರ ಗೊತ್ತಿರಬೇಕೆಂದೇನೂ ಇಲ್ಲ. ಪುರುಷರು ಹೇಗೆ ಕೆಲ ಸಂಗತಿಗಳನ್ನು ಪತ್ನಿಯಿಂದ ಮುಚ್ಚಿಡುತ್ತಾನೋ ಹಾಗೆ ಪತ್ನಿ ಕೂಡ ಕೆಲ ಸಂಗತಿಗಳನ್ನು ಪತಿ ಮುಂದೆ ಹೇಳುವುದಿಲ್ಲ. ಪತಿಗೆ ಮೋಸ ಮಾಡಬೇಕೆಂಬುದು ಪತ್ನಿಯ ಉದ್ದೇಶವಲ್ಲ. ಮನೆಯ ಶಾಂತಿ ಹಾಗೂ ಸುಖ ಸಂಬಂಧವನ್ನು ಕಾಪಾಡಿಕೊಳ್ಳಲು ಪತ್ನಿ ಕೆಲ ವಿಷ್ಯಗಳನ್ನು ಗಂಡನಿಂದ ಮುಚ್ಚಿಡುತ್ತಾಳೆ.
ಆರೋಗ್ಯಕ್ಕೆ ಸಂಬಂಧಿಸಿದ ವಿಷ್ಯವನ್ನು ಬಹುತೇಕ ಮಹಿಳೆಯರು ಮುಚ್ಚಿಡುತ್ತಾರೆ. ಅದ್ರಲ್ಲೂ ಖಾಸಗಿ ಅಂಗದಲ್ಲಿ ಗಡ್ಡೆ ಅಥವಾ ಕಲೆ ಕಾಣಿಸಿಕೊಂಡ್ರೆ ಪತಿಗೆ ಹೇಳಿ ಆತಂಕ ಹುಟ್ಟಿಸಲು ಬಯಸುವುದಿಲ್ಲ. ಇಂಥ ವಿಷ್ಯ ಹೇಳಲು ಬಹುತೇಕ ಮಹಿಳೆಯರು ಹಿಂಜರಿಯುತ್ತಾರೆ.
ಗಂಡ, ಮನೆ, ಮಕ್ಕಳು ಹಾಗೂ ಸಂಬಂಧವನ್ನು ನಿಭಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಒತ್ತಡಕ್ಕೊಳಗಾಗ್ತಾಳೆ. ಅಸಮಾಧಾನಗೊಳ್ತಾಳೆ. ಈ ಬಗ್ಗೆ ತಜ್ಞರಿಂದ ಸಲಹೆ ಪಡೆಯಲು ಶುರು ಮಾಡ್ತಾಳೆ. ಆದ್ರೆ ಇದು ಗಂಡನಿಗೆ ಅರ್ಥವಾಗಲ್ಲ ಎಂದು ಈ ವಿಷ್ಯವನ್ನು ಪತಿಗೆ ಹೇಳುವುದಿಲ್ಲ.
ಸಂಬಂಧ ಬೆಳೆಸುವ ವೇಳೆ ಏನು ಇಷ್ಟವಾಗುತ್ತೆ, ಏನು ಇಷ್ಟವಾಗಲ್ಲ ಎಂಬುದನ್ನು ಪತಿ ಮುಂದೆ ಪತ್ನಿಯಾದವಳು ಹೇಳುವುದಿಲ್ಲ. ಇದನ್ನು ಸ್ನೇಹಿತೆಯರ ಮುಂದೆ ಸುಲಭವಾಗಿ ಚರ್ಚೆ ಮಾಡ್ತಾಳೆ. ಆದ್ರೆ ಪತಿ ಮುಂದೆ ಹೇಳಲು ಹಿಂಜರಿಯುತ್ತಾಳೆ.
ಕೆಲ ಮಹಿಳೆಯರು ಪತಿಗೆ ಗೊತ್ತಿಲ್ಲದೆ ಬ್ಯಾಂಕ್ ನಲ್ಲಿ ಖಾತೆ ತೆರೆದಿರುತ್ತಾರೆ. ತಮ್ಮದೊಂದು ಪ್ರತ್ಯೇಕ ಸೇವಿಂಗ್ಸ್ ಇರಲಿ ಎನ್ನುವ ಕಾರಣಕ್ಕೆ ಅಥವಾ ಪತಿಯಿಂದ ದೂರವಾಗುವ ಸಂದರ್ಭ ಬಂದಲ್ಲಿ ನೆರವಾಗುತ್ತೆ ಎನ್ನುವ ಕಾರಣಕ್ಕೆ ಪ್ರತ್ಯೇಕವಾಗಿ ಮಹಿಳೆಯರು ಸೇವಿಂಗ್ಸ್ ಮಾಡ್ತಾರೆ.
ಮಹಿಳೆಯರು ಕೆಲವೊಮ್ಮೆ ಪತಿಯ ಚಲನವಲನದ ಮೇಲೆ ಕಣ್ಣಿಟ್ಟಿರುತ್ತಾರೆ. ಅವರ ಸಾಮಾಜಿಕ ಜಾಲತಾಣವನ್ನು ಹ್ಯಾಕ್ ಮಾಡಿರುತ್ತಾರೆ. ಆದ್ರೆ ಈ ಬಗ್ಗೆ ಪತಿಗೆ ಸುಳಿವು ನೀಡುವುದಿಲ್ಲ.