ದೇಶದ ಜನರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ವೈದ್ಯಕೀಯ ವಿಮೆಯ ಸೌಲಭ್ಯಗಳಿಂದ ವಂಚಿತರಾಗಿರುವ 40 ಕೋಟಿಗೂ ಅಧಿಕ ಜನರಿಗೆ ಸರ್ಕಾರ ಹೊಸ ಆರೋಗ್ಯ ಯೋಜನೆಯನ್ನು ಸಿದ್ಧಪಡಿಸಿದೆ. ಸರ್ಕಾರ ಇದಕ್ಕಾಗಿ 21 ವಿಮಾ ಕಂಪನಿಗಳ ಪಟ್ಟಿ ಸಿದ್ಧಪಡಿಸಿದೆ.
ಈ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುವ ಮೊದಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ವಿಮಾ ಕಂಪನಿಗಳ ನಡುವೆ ಒಂದು ಒಪ್ಪಂದಕ್ಕೆ ಸಹಿ ಹಾಕಲು ಸರ್ಕಾರ ಆಲೋಚನೆ ನಡೆಸಿದೆ. ಈ ಕಂಪನಿಗಳು ಕುಟುಂಬಗಳಿಗೆ ಹೆಚ್ಚಿನ ಸಬ್ಸಿಡಿ ಕವರ್ ನೀಡಲಿವೆ.
ಸದ್ಯ 50 ಕೋಟಿ ಬಡ ಕುಟುಂಬಗಳು, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಲಾಭವನ್ನು ಪಡೆಯುತ್ತಿವೆ. ಇಡೀ ಕುಟುಂಬ 5 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆಯುತ್ತದೆ. ಕಂಪನಿಗಳು ಸ್ವಯಂಪ್ರೇರಿತ ಆಧಾರದ ಮೇಲೆ ಉಳಿದ 40 ಕೋಟಿ ಜನರಿಗೆ ಈ ಯೋಜನೆ ಲಾಭ ನೀಡುವ ಯೋಜನೆಯನ್ನು ಸರ್ಕಾರ ಈಗ ರೂಪಿಸಿದೆ. ಯಾವುದೇ ವೈದ್ಯಕೀಯ ವಿಮೆ ಇಲ್ಲದ ಕುಟುಂಬಗಳಿಗೆ ಈ ಗ್ರೂಪ್ ಕವರ್‌ಗಳು ಸಿಗಲಿವೆ. ಇದು ಯುನಿವರ್ಸಲ್ ಹೆಲ್ತ್ ಕವರೇಜ್ ಕಡೆಗೆ ಒಂದು ದೊಡ್ಡ ಹೆಜ್ಜೆಯಾಗಲಿದೆ.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, 50 ಕೋಟಿ ಬಡ ಜನರನ್ನು ಹೊರತುಪಡಿಸಿ, ವಿವಿಧ ಯೋಜನೆಗಳಲ್ಲಿ, 3 ಕೋಟಿ ಜನರನ್ನು ಒಳಗೊಂಡಿದೆ. 14 ಕೋಟಿಗೂ ಹೆಚ್ಚು ಜನರು ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ಕಂಪನಿಗಳಲ್ಲಿ ವಿಮೆ ಪಡೆಯಲು ಮುಂದಾಗಿದ್ದಾರೆ.
ಆದ್ರೆ 40 ಕೋಟಿಗೂ ಹೆಚ್ಚು ಜನರು ಎರಡರಿಂದಲೂ ಹೊರಗಿದ್ದಾರೆ. ಅವರಿಗೆ ಯಾವುದೇ ರೀತಿಯ ವೈದ್ಯಕೀಯ ರಕ್ಷಣೆ ಇಲ್ಲ. ಅವರನ್ನು ಮಿಸ್ಸಿಂಗ್ ಮಿಡಲ್ ಎಂದು ಕರೆಯಲಾಗುತ್ತದೆ.
ಜನರು, ವೈದ್ಯಕೀಯ ವಿಮಾ ರಕ್ಷಣೆಯನ್ನು ಖರೀದಿಸದಿರಲು, ಮಾಹಿತಿ ಕೊರತೆ, ದುಬಾರಿ ಉತ್ಪನ್ನ, ವೆಚ್ಚಗಳು ಸೇರಿದಂತೆ ಹಲವು ಕಾರಣಗಳಿವೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಹಿರಿಯ ಸಲಹೆಗಾರರು ಹೇಳಿದ್ದಾರೆ.