ಪ್ರತಿಭಾವಂತ ಬಡ ವಿದ್ಯಾರ್ಥಿನಿಯೊಬ್ಬಳ ಕುಟುಂಬದ ಕಡುಕಷ್ಟ ಕಂಡು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕಿಯೊಬ್ಬರು ವಿವಿಧ ಸಂಘ – ಸಂಸ್ಥೆಗಳು, ದಾನಿಗಳ ನೆರವಿನಿಂದ ಮನೆ ನಿರ್ಮಿಸಿಕೊಟ್ಟಿರುವ ಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.
ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅನಿತಾ ಮನೆ ಪಡೆದುಕೊಂಡ ಫಲಾನುಭವಿಯಾಗಿದ್ದು, ಈಕೆಯ ಊರಾದ ಕೊಡಿಪ್ಪಾಡಿ ಗ್ರಾಮದ ಪೆರಿಯತ್ತೋಡಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮತ್ತು ಶಿಕ್ಷಕರು ಈ ಹಿಂದೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಮಣ್ಣಿನ ಗೋಡೆ, ಟಾರ್ಪಾಲ್ ಹೊದಿಕೆ ಹಾಗೂ ಸೀರೆಯನ್ನು ಅಡ್ಡಲಾಗಿ ಕಟ್ಟಿದ್ದ ಶಿಥಿಲಗೊಂಡ ಮನೆಯಲ್ಲಿ ವಿದ್ಯಾರ್ಥಿನಿ ಅನಿತಾ ಕುಟುಂಬ ವಾಸವಿರುವುದು ಅವರ ಗಮನಕ್ಕೆ ಬಂದಿತ್ತು. ಇಂತಹ ಕಡುಬಡತನದಲ್ಲೂ ಅನಿತಾ ತಾಯಿ ಸುನಂದ ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿರುವುದನ್ನು ಕಂಡು ಅಧಿಕಾರಿಗಳು ಹೆಮ್ಮೆ ವ್ಯಕ್ತಪಡಿಸಿದ್ದರು.
ಅನಿತಾ ಕುಟುಂಬಕ್ಕೆ ಹೇಗಾದರೂ ಮಾಡಿ ನೆರವಾಗಬೇಕೆಂಬ ಸಂಕಲ್ಪ ತೊಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹಾಗೂ ಕೊಂಬೆಟ್ಟು ಪ್ರೌಢಶಾಲೆ ಶಿಕ್ಷಕಿ ಗೀತಾಮಣಿ ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳನ್ನು ಸಂಪರ್ಕಿಸಿದ್ದಾರೆ. ಇವರುಗಳೆಲ್ಲರ ಸಹಕಾರದಿಂದ ಈಗ ಮನೆ ಸಿದ್ಧವಾಗಿದ್ದು ಜುಲೈ 1ರಂದು ವಿದ್ಯಾರ್ಥಿನಿ ಅನಿತಾ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.