
ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟಪ್‌ಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಜನವರಿ ತಿಂಗಳ ಆರಂಭದಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ವಿಪ್ರೊದಂತಹ ದೊಡ್ಡ ಟೆಕ್ ಕಂಪನಿಗಳು ಅನೇಕ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿವೆ.
ಈ ಬೆಳವಣಿಗೆ ಜಗತ್ತಿನಾದ್ಯಂತ ಭಾರತೀಯ ವೃತ್ತಿಪರರಲ್ಲಿ ಅಪಾರ ಒತ್ತಡ ಮತ್ತು ಆತಂಕವನ್ನು ಉಂಟುಮಾಡಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಂಪನಿಗಳು ಇದೇ ರೀತಿ ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜನೆ ಹಾಕಿಕೊಂಡಿದ್ದು, ಮತ್ತಷ್ಟು ಆತಂಕವನ್ನು ಹುಟ್ಟುಹಾಕಿದೆ.
ಜೀವನಕ್ಕಾಗಿ ಹಣ ಸಂಪಾದನೆ ಬಹಳ ಮುಖ್ಯ, ಅದರ ಜೊತೆ ಜೊತೆಗೆ ಉದ್ಯೋಗವು ಅತ್ಯಗತ್ಯಗಳಲ್ಲೊಂದು. ಹಾಗಾಗಿ ಕಂಪನಿಗಳ ಈ ವಜಾ ಪ್ರಕ್ರಿಯೆ ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ಪ್ಯಾನಿಕ್ ಅಟ್ಯಾಕ್ ಮತ್ತು ಖಿನ್ನತೆಯ ಸಮಸ್ಯೆಯಿಂದ ವಿವಿಧ ದೊಡ್ಡ ದೊಡ್ಡ ಟೆಕ್ ಕಂಪನಿಗಳಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದಕ್ಕೆ ಕಾರಣ ತಮ್ಮ ಭವಿಷ್ಯದ ಮೇಲೆ ಹಿಡಿತ ಕಳೆದುಕೊಳ್ಳುವ ಭಯ. ಕೆಲಸ ಕಳೆದುಕೊಳ್ಳುವ ಆತಂಕದಿಂದಾಗಿ ತೀವ್ರ ಮಾನಸಿಕ ನೋವು, ಸಂಕಟ ಅವರಿಗೆ ಉಂಟಾಗಿದೆ.
ಜನವರಿ 2023ರಲ್ಲಿ ಪ್ರತಿದಿನ ಸುಮಾರು 3 ಸಾವಿರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಂಖ್ಯೆಯು ಆತಂಕ, ಖಿನ್ನತೆ ಮತ್ತು ಇತರ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಯಾರೂ ಸ್ಥೈರ್ಯ ಕಳೆದುಕೊಳ್ಳಬಾರದು, ಪ್ರಸ್ತುತ ಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ಈ ಬೆಳವಣಿಗೆಯನ್ನು ಅರಗಿಸಿಕೊಳ್ಳುವುದು ಕಷ್ಟ. ಆದರೆ ಭರವಸೆ ಕಳೆದುಕೊಳ್ಳಬೇಡಿ, ನಿಮ್ಮ ಆಂತರಿಕ ಧೈರ್ಯವನ್ನು ಕಾಪಾಡಿಕೊಳ್ಳಿ ಮತ್ತು ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ ಎಂಬುದು ತಜ್ಞರ ಸಲಹೆ.
ನಿಮ್ಮ ಆಲೋಚನೆಗಳನ್ನು ಮುಕ್ತಗೊಳಿಸಿ, ನಿಮಗಾಗಿ ದೈನಂದಿನ ದಿನಚರಿಯನ್ನು ಹೊಂದಿಸಿಕೊಳ್ಳಿ ಮತ್ತು ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಿ. ನೀವು ದುಃಖಿತರಾದಾಗ, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಿರಿ. ಬೇರೆ ಉದ್ಯೋಗವನ್ನು ಹುಡುಕುವುದು ಮತ್ತು ನಿಮ್ಮ ಕೆಲಸದ ಪ್ರೊಫೈಲ್ ಅನ್ನು ನವೀಕರಿಸುವುದು ಬಹಳ ಮುಖ್ಯ. ವಜಾಗೊಳಿಸುವಿಕೆಯ ಆತಂಕವನ್ನು ಎದುರಿಸಲು ಅದಕ್ಕೆ ತಕ್ಕಂತೆ ದಿನಚರಿಯನ್ನು ಬದಲಾಯಿಸಿಕೊಳ್ಳಿ. ನೀವು ದುರ್ಬಲರಾಗಿರುವಾಗ ನಿಮಗೆ ಸಹಾಯ ಮಾಡುವ ಮತ್ತು ನಿಮ್ಮ ಭಾವನಾತ್ಮಕ ಮನಸ್ಥಿತಿಯನ್ನು ಬೆಂಬಲಿಸುವ ಜನರೊಂದಿಗೆ ಸಂಪರ್ಕ ಸಾಧಿಸಿ.
ದೈಹಿಕವಾಗಿ ಕ್ರಿಯಾಶೀಲರಾಗಿರಿ. ಈ ಸಮಯದಲ್ಲಿ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಮುಖ್ಯ. ಆರೋಗ್ಯಕರ ಆಹಾರವನ್ನೇ ತಿನ್ನಿರಿ. ವ್ಯಾಯಾಮದ ಜೊತೆಗೆ, ಆಹಾರದ ಬಗ್ಗೆಯೂ ನೀವು ಕಾಳಜಿ ವಹಿಸಬೇಕು. ದೈಹಿಕ ಆರೋಗ್ಯವನ್ನೂ ನಮ್ಮ ಮಾನಸಿಕ ಆರೋಗ್ಯ ಬೆಂಬಲಿತವಾಗಿರುತ್ತದೆ. ಮನಸ್ಸಿನ ನೋವು, ದುಗುಡ ಆತಂಕದ ನಿವಾರಣೆಗೆ ಧ್ಯಾನ ಮಾಡುವುದು ಉತ್ತಮ.