ಸ್ನಾನ ಮಾಡುವುದು ಒಂದು ರೀತಿಯ ಆಹ್ಲಾದಕರ ಅನುಭವ. ಸ್ನಾನದ ನಂತರ ಪ್ರತಿಯೊಬ್ಬರೂ ತಾಜಾತನವನ್ನು ಅನುಭವಿಸುತ್ತಾರೆ. ಬೇಸಿಗೆಯಲ್ಲಂತೂ ಎಷ್ಟು ಬಾರಿ ಸ್ನಾನ ಮಾಡಿದರೂ ಹಿತವಾಗಿಯೇ ಇರುತ್ತದೆ.
ಆದ್ರೆ ಹಗಲಿನ ಬದಲು ರಾತ್ರಿ ಸ್ನಾನ ಮಾಡಿದರೆ ಎಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಗೊತ್ತಾ? ರಾತ್ರಿ ಸ್ನಾನ ಅನೇಕ ರೋಗಗಳಿಂದ ನಮ್ಮನ್ನು ದೂರವಿಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುವುದರಿಂದ ಹಿಡಿದು ಚರ್ಮವನ್ನು ಸುಂದರವಾಗಿಸುವವರೆಗೆ ಹಲವು ಪ್ರಯೋಜನಗಳು ರಾತ್ರಿ ಸ್ನಾನದಲ್ಲಿವೆ.
ದೇಹ ಮತ್ತು ಮನಸ್ಸು ಶಾಂತವಾಗಿರುತ್ತದೆ : ಸ್ನಾನ ಮಾಡಿದಾಗ ದೇಹ ಮತ್ತು ಮನಸ್ಸು ಎರಡೂ ಒಂದು ರೀತಿ ಹಗುರಾಗುತ್ತವೆ. ಅದರಲ್ಲೂ ರಾತ್ರಿ ಸ್ನಾನ ಮನಸ್ಸು ಮತ್ತು ದೇಹವನ್ನು ಉಲ್ಲಾಸಗೊಳಿಸುತ್ತದೆ. ರಾತ್ರಿಯ ಸ್ನಾನವು ನಿಮ್ಮ ಚಿತ್ತವನ್ನು ಉಲ್ಲಾಸಗೊಳಿಸುವ ಮೂಲಕ ಮನಸ್ಸು ಮತ್ತು ದೇಹ ಎರಡನ್ನೂ ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ಚೆನ್ನಾಗಿ ನಿದ್ದೆ ಮಾಡಲು ಸಹಕಾರಿ : ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂಥವರು ರಾತ್ರಿ ಸ್ನಾನ ಮಾಡಿ ಮಲಗಿದ್ರೆ ನಿದ್ರಾಹೀನತೆ ಉಂಟಾಗುವುದಿಲ್ಲ. ಸ್ನಾನ ಮಾಡುವುದರಿಂದ ಒತ್ತಡವೆಲ್ಲ ನಿವಾರಣೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
ತೂಕ ಕೂಡ ಕಡಿಮೆ ಮಾಡಬಹುದು: ರಾತ್ರಿ ಸ್ನಾನ ಮಾಡುವುದರಿಂದ ತೂಕ ಇಳಿಸಬಹುದು ಅನ್ನೋದು ನಿಮಗೆ ತಿಳಿದಿದೆಯೇ? ಅಷ್ಟೇ ಅಲ್ಲ ಮೈಗ್ರೇನ್, ಮೈಕೈ ನೋವು ಮತ್ತು ಕೀಲು ನೋವಿನಿಂದಲೂ ರಾತ್ರಿ ಸ್ನಾನ ಉಪಶಮನ ನೀಡುತ್ತದೆ.
ಆಯಾಸ ದೂರವಾಗುತ್ತದೆ: ನಿಮಗೆ ತುಂಬಾ ಸುಸ್ತಾಗಿದ್ದರೆ ರಾತ್ರಿ ಮಲಗುವ ಮೊದಲು ಸ್ನಾನ ಮಾಡಿ. ಇದು ನಿಮ್ಮ ಆಯಾಸವನ್ನು ಹೋಗಲಾಡಿಸುತ್ತದೆ ಮತ್ತು ದೇಹ ಹಗುರಾಗಿ ಚೈತನ್ಯ ಮೂಡುತ್ತದೆ.
ಬಿಪಿ ನಿಯಂತ್ರಣ: ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ರಾತ್ರಿ ಸ್ನಾನ ಮಾಡಬೇಕು. ಏಕೆಂದರೆ ಸ್ನಾನದ ನಂತರ ನೀವು ವಿಶ್ರಾಂತಿ ಪಡೆಯುತ್ತೀರಿ. ಈ ಸಂದರ್ಭದಲ್ಲಿ ನಿಮ್ಮ ಬಿಪಿ ಸಾಮಾನ್ಯವಾಗಿರುತ್ತದೆ.
ಕಣ್ಣುಗಳಿಗೆ ಪ್ರಯೋಜನಕಾರಿ: ರಾತ್ರಿಯಲ್ಲಿ ಸ್ನಾನ ಮಾಡುವುದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ರಾತ್ರಿ ಸ್ನಾನದ ವೇಳೆ ನಮ್ಮ ಕಣ್ಣಿಗೆ ನೀರು ತಗುಲಿದಾಗ ಅವು ತಾಜಾತನವನ್ನು ಅನುಭವಿಸುತ್ತವೆ. ಕಣ್ಣುಗಳಿಗಾಗಿದ್ದ ಆಯಾಸ ನಿವಾರಣೆಯಾಗುತ್ತದೆ.