ಹಸು ಅಥವಾ ಎಮ್ಮೆಯ ಹಾಲನ್ನು ಕುಡಿಯುವುದು ಮಕ್ಕಳು, ಹಿರಿಯರು ಮತ್ತು ಕಿರಿಯರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಲು ಸಂಪೂರ್ಣ ಆಹಾರ. ಇದು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ಪ್ರೋಟೀನ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಸತು, ವಿಟಮಿನ್ ಡಿ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ನಮ್ಮಲ್ಲಿ ಹೆಚ್ಚಿನವರು ಬಿಸಿ ಹಾಲು ಕುಡಿಯಲು ಇಷ್ಟಪಡುತ್ತಾರೆ, ಆದರೆ ತಣ್ಣನೆಯ ಹಾಲನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.
ತೂಕ ಕಡಿಮೆ ಮಾಡಲು ಸಹಕಾರಿ
ತೂಕ ಇಳಿಸಿಕೊಳ್ಳಲು ನಾವು ವ್ಯಾಯಾಮ ಮತ್ತು ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಆಶ್ರಯಿಸುತ್ತೇವೆ. ಆದರೆ ಸಾಕಷ್ಟು ಪ್ರಯತ್ನದ ನಂತರವೂ ಹೊಟ್ಟೆಯ ಬೊಜ್ಜು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಸುಲಭದ ವಿಧಾನವೆಂದರೆ ತಣ್ಣನೆಯ ಹಾಲು ಸೇವಿಸಲು ಪ್ರಾರಂಭಿಸಬೇಕು. ಕ್ಯಾಲ್ಸಿಯಂ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ, ಇದು ಚಯಾಪಚಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ದೇಹದ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ತಣ್ಣನೆಯ ಹಾಲನ್ನು ಸೇವಿಸಿದರೆ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಇದರಿಂದಾಗಿ ತೂಕವು ಕ್ರಮೇಣ ಕಡಿಮೆಯಾಗುತ್ತದೆ.
ಹೊಟ್ಟೆಯಲ್ಲಿ ಉರಿ ಕಡಿಮೆಯಾಗುತ್ತದೆ
ಆಗಾಗ ಹೊಟ್ಟೆಯಲ್ಲಿ ಸುಡುವ ಸಂವೇದನೆಯನ್ನು ಅನುಭವಿಸುತ್ತಿದ್ದರೆ ಅಥವಾ ಆಸಿಡಿಟಿಯ ಸಮಸ್ಯೆಯಿದ್ದರೆ ತಣ್ಣನೆಯ ಹಾಲು ನಿಮಗೆ ರಾಮಬಾಣವಿದ್ದಂತೆ. ಈ ಆರೋಗ್ಯಕರ ಪಾನೀಯ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತಣ್ಣನೆಯ ಹಾಲಿಗೆ ಸ್ವಲ್ಪ ಇಸಾಬ್‌ಗೋಲ್ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗುತ್ತದೆ.
ಚರ್ಮವನ್ನು ಆರೋಗ್ಯಕರವಾಗಿಡುತ್ತದೆ
ತಣ್ಣನೆಯ ಹಾಲು ಬಹಳಷ್ಟು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ಇದರಿಂದಾಗಿ ದೇಹವು ಡಿಹೈಡ್ರೇಟ್ ಆಗುವುದಿಲ್ಲ. ತ್ವಚೆ ಕೂಡ ಹೊಳಪು ಪಡೆದುಕೊಳ್ಳುತ್ತದೆ. ಬಹುತೇಕ ಚರ್ಮದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಪ್ರತಿದಿನ ಬೆಳಗ್ಗೆ ತಣ್ಣನೆಯ ಹಾಲು ಕುಡಿಯುವುದನ್ನು ರೂಢಿಸಿಕೊಳ್ಳಿ.