ಅರಿಶಿನವನ್ನು ಪ್ರತಿ ಭಾರತೀಯರೂ ಅಡುಗೆಗೆ ಬಳಸ್ತಾರೆ. ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಮಸಾಲೆ ಪದಾರ್ಥ ಇದು. ಅರಿಶಿನ ಆಯುರ್ವೇದದ ಮೂಲಿಕೆಯೂ ಹೌದು. ಅರಿಶಿನದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ತಾಮ್ರ, ಸತು ಮತ್ತು ರಂಜಕದಂತಹ ಅನೇಕ ಆರೋಗ್ಯಕರ ಗುಣಗಳಿವೆ. ಸಾಮಾನ್ಯವಾಗಿ ನಾವು ತಿನಿಸುಗಳಲ್ಲಿ ಅರಿಶಿನ ಬೆರೆಸುತ್ತೇವೆ ಅಥವಾ ಹಾಲಿಗೆ ಅರಿಶಿನ ಬೆರೆಸಿಕೊಂಡು ಕುಡಿಯುತ್ತೇವೆ.
ಆದರೆ ನೀವು ಎಂದಾದರೂ ಅರಿಶಿನ ನೀರನ್ನು ಸೇವಿಸಿದ್ದೀರಾ? ಅರಿಶಿನವನ್ನು ನೀರಿಗೆ ಹಾಕಿಕೊಂಡು ಕುಡಿಯುವುದರಿಂದ ಅನೇಕ ಲಾಭಗಳಿವೆ. ಅರಿಶಿನ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕೀಲು ನೋವಿನಿಂದಲೂ ಪರಿಹಾರ ಸಿಗುತ್ತದೆ. ಜೀರ್ಣಕ್ರಿಯೆ ಮತ್ತು ಯಕೃತ್ತು ಸಹ ಆರೋಗ್ಯಕರವಾಗಿರುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ: ಅರಿಶಿನವು ಎಂಟಿಬ್ಯಾಕ್ಟೀರಿಯಲ್ ಮತ್ತು ಎಂಟಿವೈರಲ್ ಗುಣಗಳನ್ನು ಹೊಂದಿದೆ. ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅರಿಶಿನ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಋತುಮಾನದ ಕಾಯಿಲೆಗಳಿಗೆ ನಾವು ತುತ್ತಾಗುವುದಿಲ್ಲ.
ತೂಕ ಇಳಿಕೆ: ಅರಿಶಿನದಲ್ಲಿರುವ ಔಷಧೀಯ ಗುಣಗಳು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಉಪಯುಕ್ತವಾಗಿವೆ. ಅರಿಶಿನ ನೀರು ವಾಯು, ಗ್ಯಾಸ್ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹಾಗಾಗಿ ಅರಿಶಿನ ನೀರನ್ನು ಕುಡಿದರೆ ತೂಕ ಸಹ ಕಡಿಮೆಯಾಗುತ್ತದೆ.
ದೇಹವನ್ನು ನಿರ್ವಿಷಗೊಳಿಸುತ್ತದೆ: ಅರಿಶಿನ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ವಿಷವು ಸುಲಭವಾಗಿ ಹೊರಹಾಕಲ್ಪಡುತ್ತದೆ. ಇದು ಆರೋಗ್ಯದ ಮೇಲೆ ಹಾಗೂ ತ್ವಚೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ. ತ್ವಚೆಯನ್ನು ಇದು ಉತ್ತಮಗೊಳಿಸುತ್ತದೆ. ಅರಿಶಿನ ನೀರನ್ನು ಡಿಟಾಕ್ಸ್ ಪಾನೀಯವಾಗಿ ಕೂಡ ಸೇವಿಸಬಹುದು.
ಮೂಳೆ ನೋವಿಗೆ ಪರಿಹಾರ: ಅರಿಶಿನ ನೀರು ಮೂಳೆ ನೋವು ಅಥವಾ ಕಾಲೋಚಿತ ಜ್ವರದಿಂದ ದೇಹದ ನೋವನ್ನು ನಿವಾರಿಸುತ್ತದೆ. ಈ ನೀರನ್ನು ಸೇವಿಸುವುದರಿಂದ ಕೆಲವೇ ನಿಮಿಷಗಳಲ್ಲಿ ನೀವು ಪರಿಣಾಮವನ್ನು ಕಾಣಲು ಪ್ರಾರಂಭಿಸುತ್ತೀರಿ.
ಅರಿಶಿನ ನೀರನ್ನು ತಯಾರಿಸುವುದು ಹೇಗೆ? ಅರಿಶಿನ ನೀರನ್ನು ತಯಾರಿಸಲು ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿ ಕುದಿಯಲು ಇಡಿ. ಅದಕ್ಕೆ ಅರ್ಧ ಚಮಚ ಅರಿಶಿನದ ಪುಡಿ ಅಥವಾ ಹಸಿ ಅರಿಶಿನವಿದ್ದರೆ ಒಂದು ತುಂಡನ್ನು ಜಜ್ಜಿ ಹಾಕಿ. ನೀರು ಚೆನ್ನಾಗಿ ಕುದ್ದ ಬಳಿಕ ಅದನ್ನು ಲೋಟಕ್ಕೆ ಫಿಲ್ಟರ್ ಮಾಡಿಕೊಳ್ಳಿ. ಅರ್ಧ ಚಮಚ ನಿಂಬೆ ರಸವನ್ನು ಬೆರೆಸಿ ಬೆಚ್ಚಗೆ ಕುಡಿಯಿರಿ.