ಜ್ವರ, ಶೀತ, ಕೆಮ್ಮು, ನೆಗಡಿ, ಮೈ ಕೈ ನೋವು ಬಂದರೆ ಬಹುತೇಕರು ಡೋಲೋ 650 ಮಾತ್ರ ಮೊರೆ ಹೋಗುತ್ತಾರೆ. ಅದರಲ್ಲೂ ಕೊರೊನಾ ಸಾಂಕ್ರಮಿಕದ ಸಂದರ್ಭದಲ್ಲಿ ಡೋಲೋ 650 ಮಾತ್ರೆಗಳು ಅನಿವಾರ್ಯ ಅಗತ್ಯಗಳಲ್ಲಿ ಒಂದಾಗಿತ್ತು. ಇದೀಗ ಆ ಕಂಪನಿಯ ಕುರಿತು ಶಾಕಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ.
ಜುಲೈ 6ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡೋಲೋ 650 ಮಾತ್ರೆ ತಯಾರಿಸುವ ಮೈಕ್ರೋಲ್ಯಾಬ್ಸ್ ಕಚೇರಿ ಮೇಲೆ ದಾಳಿ ನಡೆಸಿದ್ದರು. ಕರ್ನಾಟಕದ ಬೆಂಗಳೂರು ಸೇರಿದಂತೆ 9 ರಾಜ್ಯಗಳ 36 ಸ್ಥಳಗಳ ಮೇಲೆ ಏಕಕಾಲದಲ್ಲಿ ಈ ದಾಳಿ ನಡೆದಿತ್ತು.
ದಾಳಿ ವೇಳೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಮೈಕ್ರೋ ಲ್ಯಾಬ್ಸ್ ಕಂಪನಿಯು ತನ್ನ ಉತ್ಪನ್ನಗಳ ಪ್ರಚಾರಕ್ಕಾಗಿಯೇ ಬರೋಬ್ಬರಿ 1000 ಕೋಟಿ ರೂಪಾಯಿಗಳನ್ನು ವ್ಯಯಿಸಿರುವುದು ಕಂಡು ಬಂದಿದೆ. ಇದನ್ನು ವೈದ್ಯರು ಹಾಗೂ ವೃತ್ತಿಪರರಿಗೆ ಉಚಿತ ಉಡುಗೊರೆಗಳನ್ನು ನೀಡಲು, ಪ್ರಯಾಣ ವೆಚ್ಚ ಭರಿಸಲು ಹಾಗೂ ಪ್ರಚಾರಕ್ಕಾಗಿ ಸಭೆ ಆಯೋಜಿಸುವುದೂ ಸೇರಿದಂತೆ ವಿವಿಧ ಕಾರ್ಯಗಳಿಗೆ ಬಳಸಲಾಗಿದೆ ಎಂದು ತಿಳಿದು ಬಂದಿದೆ.