
ಈ ಅದ್ಭುತವಾದ ವಿಡಿಯೋವನ್ನು ಅಮೇಜಿಂಗ್ ನೇಚರ್ ನ ಟ್ವಿಟ್ಟರ್ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಕ್ಯಾಪ್ ಕ್ಲೌಡ್ ಎಂದೂ ಕರೆಯಲ್ಪಡುವ ಲೆಂಟಿಕ್ಯುಲರ್ ಮೋಡವು ಹಿಮದಿಂದ ಆವೃತವಾದ ಪರ್ವತದ ಶಿಖರದ ಮೇಲೆ ಸುತ್ತುತ್ತಿರುವ ವಿಚಿತ್ರವಾದ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಮೋಡವು ಪರ್ವತದ ಸುತ್ತಲೂ ತ್ರಿಕೋನದ ಟೋಪಿಯಂತಹ ರಚನೆಯನ್ನು ರೂಪಿಸಿದೆ. ಬಳಿಕ ನಿಧಾನವಾಗಿ ತಲೆಕೆಳಗಾದ ಸುಂಟರಗಾಳಿಯಂತೆ ಅದೇ ಸ್ಥಾನದಲ್ಲಿ ಸುತ್ತುತ್ತಲೇ ಇತ್ತು.
ಲೆಂಟಿಕ್ಯುಲರ್ ಮೋಡ ಎಂದರೇನು ?
ವಾತಾವರಣದ ಮೇಲಿನ ಮಟ್ಟದಲ್ಲಿ ತೇವಾಂಶವು ಹೆಚ್ಚಾಗಲು ಪ್ರಾರಂಭಿಸಿದಾಗ ಪರ್ವತ ಶಿಖರಗಳ ಮೇಲೆ ಲೆಂಟಿಕ್ಯುಲರ್ ಮೋಡಗಳು ರೂಪುಗೊಳ್ಳುತ್ತವೆ. ಲೆಂಟಿಕ್ಯುಲರ್ ಮೋಡಗಳನ್ನು ಕೆಲವೊಮ್ಮೆ ಸ್ಟ್ಯಾಂಡಿಂಗ್ ವೇವ್ ಕ್ಲೌಡ್ಸ್ ಎಂದೂ ಕರೆಯುತ್ತಾರೆ. ಏಕೆಂದರೆ, ಅವು ವಾತಾವರಣದಲ್ಲಿನ ಅಲೆಗಳೊಂದಿಗೆ ಸಂಬಂಧ ಹೊಂದಿವೆ. ಪರ್ವತ ಶ್ರೇಣಿ ಅಥವಾ ಜ್ವಾಲಾಮುಖಿಯಂತಹ ಭೌತಿಕ ಅಡಚಣೆಯ ಮೇಲೆ ವೇಗವಾಗಿ ಚಲಿಸುವ ಗಾಳಿಯು ಬಲವಂತವಾಗಿ ಚಲಿಸಿದಾಗ ಇವು ಅಭಿವೃದ್ಧಿಗೊಳ್ಳುತ್ತವೆ.