ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಿದೆ. ಗಡುವು ಮುಗಿಯುವ ಮುನ್ನ, ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ NPS ಖಾತೆಯಲ್ಲಿನ ವಹಿವಾಟುಗಳನ್ನು ನಿರ್ಬಂಧಿಸಲಿದೆ.
ಅಸ್ತಿತ್ವದಲ್ಲಿರುವ ಎಲ್ಲಾ ಚಂದಾದಾರರು ನಿರಂತರ ಮತ್ತು ಸುಗಮ ವಹಿವಾಟುಗಳಿಗಾಗಿ 2023ರ ಜೂನ್ 30ರ ಮೊದಲು ತಮ್ಮ ಪ್ಯಾನ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕು. ಇಲ್ಲದಿದ್ದಲ್ಲಿ ಅಂತಹ NPS ಖಾತೆಗಳನ್ನು ನಿರ್ಬಂಧಿಸಲಾಗುತ್ತದೆ. PAN ಮತ್ತು ಆಧಾರ್ ಲಿಂಕ್ ಆಗುವವರೆಗೆ NPS ವಹಿವಾಟುಗಳನ್ನು ಕೂಡ ನಿರ್ಬಂಧಿಸಲಾಗುವುದು ಎಂದು ಪ್ರಾಧಿಕಾರ ಸುತ್ತೋಲೆಯಲ್ಲಿ ತಿಳಿಸಿದೆ. ಈವರೆಗೆ CBDT ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವನ್ನು ಐದು ಬಾರಿ ವಿಸ್ತರಿಸಿದೆ. ಕೊನೆಯ ವಿಸ್ತರಣೆಯನ್ನು ಮಾರ್ಚ್ 28 ರಂದು ಮಾಡಲಾಯಿತು.
ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ದಂಡ ಏನು?
ಪ್ಯಾನ್-ಆಧಾರ್ ಲಿಂಕ್‌ಗೆ ಹೊಸ ಗಡುವು ಜೂನ್ 30. ಈ ದಿನಾಂಕದೊಳಗೆ ಲಿಂಕ್ ಮಾಡದೇ, ಜುಲೈ 1 ಅಥವಾ ನಂತರದ ದಿನಗಳಲ್ಲಿ ಮಾಡಿದರೆ ಬಳಕೆದಾರರಿಗೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಯಾರು ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಬೇಕು?
ಆದಾಯ ತೆರಿಗೆ ಕಾಯಿದೆ, 1961ರ ನಿಬಂಧನೆಗಳ ಅಡಿಯಲ್ಲಿ 2017, ಜುಲೈ 1ರಂದು ನಿಗದಿಪಡಿಸಿದ PAN ಕಾರ್ಡ್ ಪಡೆದಿರುವವರು ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಅವುಗಳನ್ನು ಪರಸ್ಪರ ಲಿಂಕ್ ಮಾಡಬೇಕು. ಹಾಗೆ ಮಾಡಲು ವಿಫಲವಾದರೆ ಕಾಯಿದೆಯ ಅಡಿಯಲ್ಲಿ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಜೂನ್ 30ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದಲ್ಲಿ ಬಳಕೆದಾರರ PAN ಸಂಖ್ಯೆ ಜುಲೈ 1ರಿಂದ ಸಕ್ರಿಯವಾಗಿರುವುದಿಲ್ಲ.
ಅಂತಹ PAN ಗಳ ವಿರುದ್ಧ ಯಾವುದೇ ಮರುಪಾವತಿ ಮಾಡಲಾಗುವುದಿಲ್ಲ. PAN ನಿಷ್ಕ್ರಿಯವಾಗಿರುವ ಅವಧಿಗೆ ಮರುಪಾವತಿಗೆ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.ಕಾಯಿದೆಯಲ್ಲಿ ಒದಗಿಸಿದಂತೆ TDS ಮತ್ತು TCS ಅನ್ನು ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ. 1000 ರೂಪಾಯಿ ದಂಡ ಪಾವತಿಸಿ, ಪ್ರಾಧಿಕಾರದ ನಿಯಮಕ್ಕೆ ತಕ್ಕಂತೆ ನಡೆದುಕೊಂಡಲ್ಲಿ ವೆಚ್ಚವನ್ನು ಪಾವತಿಸಿದ 30 ದಿನಗಳ ನಂತರ PAN ಸಂಖ್ಯೆಯನ್ನು ಮತ್ತೆ ಕಾರ್ಯಗತಗೊಳಿಸಲಾಗುತ್ತದೆ.