ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಪೌರಕಾರ್ಮಿಕರಿಗೆ ನೀಡುವ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಇಂದಿನಿಂದ ಮತ್ತೆ ಪುನರಾರಂಭಿಸಿದೆ. ಇದಕ್ಕೆ ಇಂದು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ.
ಬೆಳಗ್ಗೆಯೇ ಪೌರಕಾರ್ಮಿಕರು ಕೆಲಸಕ್ಕೆ ಹಾಜರಾಗುವುದರಿಂದ ಅವರಿಗೆ ಈ ಹಿಂದೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಇದಕ್ಕೆ ನಿಗದಿ ಮಾಡಿದ್ದ ಮೊತ್ತ ಕಡಿಮೆ ಇದ್ದ ಕಾರಣ ಗುಣಮಟ್ಟದ ಉಪಹಾರ ಲಭಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಈ ಹಿನ್ನಲೆಯಲ್ಲಿ ಉಪಹಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಉಪಹಾರದ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಪಾಲಿಕೆ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇದೀಗ ಪೌರಾಡಳಿತ ಇಲಾಖೆ ಪ್ರತಿ ಕಾರ್ಮಿಕರ ಉಪಹಾರದ ಮೊತ್ತವನ್ನು 35 ರೂಪಾಯಿಗಳಿಗೆ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಹೀಗಾಗಿ ಇಂದಿನಿಂದ ಪೌರಕಾರ್ಮಿಕರಿಗೆ ಅವರು ಕಾರ್ಯ ನಿರ್ವಹಿಸುವ ಸ್ಥಳದಲ್ಲಿಯೇ ಉಪಹಾರ ನೀಡಲಾಗುತ್ತದೆ.