ಪೌರ ಕಾರ್ಮಿಕರು, ಇಡೀ ನಗರದ ಸ್ವಚ್ಛತೆ ಕಾಪಾಡುವ ವಾರಿಯರ್ಗಳು. ಇಡೀ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಮಿಕರಿಗೆ ಕೋವಿಡ್ ತಂದೊಡ್ಡಿರುವ ಸಂಕಷ್ಟ ಅಂತಿಂತದ್ದಲ್ಲ. ಹೋಮ್ ಐಸೋಲೇಷನ್ನಿಂದ ಹೆಚ್ಚಾಗುತ್ತಿರುವ ಕೋವಿಡ್ ತ್ಯಾಜ್ಯದಿಂದ ಪೌರ ಕಾರ್ಮಿಕರು ಆತಂಕ ಪಡುತ್ತಿದ್ದಾರೆ.
ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗಿದ್ರು, ಆಸ್ಪತ್ರೆಗೆ ಬೆರಳೆಣಿಕೆ ಮಂದಿ ಅಡ್ಮಿಟ್ ಆಗ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಹೋಮ್ ಐಸೋಲೇಷನ್, ಈಗ ಮನೆಯಲ್ಲಿ ಕುಳಿತೇ ಸ್ವಯಂ ಆಗಿ ಕೊರೋನಾ ಟೆಸ್ಟ್ ಮಾಡಿಕೊಳ್ಳಬಹುದು. ಸ್ವಯಂ ಟೆಸ್ಟ್ ಕಿಟ್ ಗಳಿಂದ ಮನೆಯಲ್ಲೆ ಐಸೋಲೇಟ್ ಆಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದೇ ಅಂಶ ಬಿಬಿಎಂಪಿಯ ಪೌರಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.
ಕಸ ಬೇರ್ಪಡಿಸಿ ಎಂದು ಎಷ್ಟೇ ಜಾಗೃತಿ ಮೂಡಿಸಿದರು ಈ ಹವ್ಯಾಸವನ್ನ ಸಾರ್ವಜನಿಕರು ಬೆಳೆಸಿಕೊಂಡಿಲ್ಲ. ಈ ಕೊರೋನಾ ಸಂದರ್ಭದಲ್ಲು ಇದೇ ಪ್ರವೃತ್ತಿ ಮುಂದುವರೆದಿದ್ದು, ಮಾಸ್ಕ್, ಕೋವಿಡ್ ಟೆಸ್ಟ್ ಕಿಟ್ ಗಳನ್ನ ಬೇರ್ಪಡಿಸದೆ ಕಸದ ಜೊತೆ ಮಿಕ್ಸ್ ಮಾಡಿ ಕೊಡುತ್ತಿದ್ದಾರೆ ಎಂದು ಪೌರ ಕಾರ್ಮಿಕರು ಆರೋಪಿಸಿದ್ದಾರೆ. ಮಾಸ್ಕ್, ಕೋವಿಡ್ ಟೆಸ್ಟ್ ಕಿಟ್ ವಿಲೇವಾರಿ ಮಾಡೋಕೆ ನಮಗೆ ಆತಂಕವಾಗುತ್ತಿದೆ. ರಸ್ತೆಗಳಲ್ಲೂ ಟೆಸ್ಟ್ ಕಿಟ್ ಮಾಸ್ಕ್ ಗಳನ್ನ ಎಸೆಯುತ್ತಿದ್ದಾರೆ. ಪರಿಸ್ಥಿತಿ ಹೇಗೆ ಇದ್ದರು ಸ್ವಚ್ಛ ಮಾಡದೆ ಬೇರೆ ದಾರಿಯಿಲ್ಲ ಎಂದು ಪೌರ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸೋಂಕು ಹರಡುತ್ತೆ ಅನ್ನೋ ಭಯದಲ್ಲೆ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಬೇಜವಾಬ್ದಾರಿತನದಿಂದ ಬೇಸತ್ತಿರುವ ಕಾರ್ಮಿಕರು ಕೊನೆ ಉಪಾಯವಾಗಿ ಕೋವಿಡ್ ತ್ಯಾಜ್ಯವನ್ನ ಸರಿಯಾಗಿ ಬೇರ್ಪಡಿಸಲು ಜನರಲ್ಲಿ ಅರಿವು ಮೂಡಿಸಿ ಎಂದು ಬಿಬಿಎಂಪಿ ವೈದ್ಯಾಧಿಕಾರಿಗಳ ಮೊರೆ ಹೋಗಿದ್ದಾರೆ. ಸಾರ್ವಜನಿಕರಲ್ಲು ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.