ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಯುವತಿಯರ ಹಾಟ್ ಫೇವರಿಟ್. ಬ್ಯಾಚುಲರ್ ಆಗಿರೋದ್ರಿಂದ ಈ ಸ್ಮಾರ್ಟ್ ಹೀರೋವನ್ನು ಆರಾಧಿಸುವವರಿಗೆ ಲೆಕ್ಕವೇ ಇಲ್ಲ. ಇದೀಗ ವಿಜಯ್ ದೇವರಕೊಂಡ ಅವರ ಹೊಸ ಸಿನೆಮಾದ ಪೋಸ್ಟರ್ ನೋಡಿ ಯುವತಿಯರ ನಿದ್ದೆಯೇ ಹಾರಿ ಹೋಗಿದೆ.
ಲಿಗರ್ ಚಿತ್ರದ ಹೊಸ ಪೋಸ್ಟರ್ನಲ್ಲಿ ವಿಜಯ್ ದೇವರಕೊಂಡ ಬಟ್ಟೆಯನ್ನೇ ಧರಿಸಿಲ್ಲ. ಸಂಪೂರ್ಣ ನಗ್ನ ಅವತಾರದಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಖಾಸಗಿ ಅಂಗಗಳನ್ನು ಹೂಗುಚ್ಛದಿಂದ ಮರೆಮಾಡಿಕೊಂಡು ಬೆತ್ತಲೆಯಾಗಿ ನಿಂತಿದ್ದಾರೆ.
ತಮ್ಮ ಕಟ್ಟುಮಸ್ತಾದ ದೇಹವನ್ನು ವಿಜಯ್ ದೇವರಕೊಂಡ ಪ್ರದರ್ಶಿಸಿದ್ದಾರೆ. ಲಿಗರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ದೇವರಕೊಂಡಗೆ ಅನನ್ಯ ಪಾಂಡೆ ನಾಯಕಿ. ವಿಜಯ್ರ ಈ ಬೋಲ್ಡ್ ಅವತಾರ ಅಭಿಮಾನಿಗಳನ್ನು ನಿಬ್ಬೆರಗಾಗಿಸಿದೆ.
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಲಿಗರ್ ಕೂಡ ಒಂದು. ಪೋಸ್ಟರ್ ಹಂಚಿಕೊಂಡಿರೋ ದೇವರಕೊಂಡ, ಮಾನಸಿಕವಾಗಿ, ದೈಹಿಕವಾಗಿ ನನ್ನ ಅತ್ಯಂತ ಸವಾಲಿನ ಪಾತ್ರ ಇದು ಅಂತಾ ಬರೆದುಕೊಂಡಿದ್ದಾರೆ. ಶೀಘ್ರವೇ ಲಿಗರ್ ತೆರೆಮೇಲೆ ಬರಲಿದೆ ಎಂಬ ಭರವಸೆಯನ್ನೂ ಕೊಟ್ಟಿದ್ದಾರೆ.
ಲಿಗರ್ ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ನಲ್ಲಿ ಮೂಡಿಬರ್ತಿರೋ ಮೊದಲ ಸಿನೆಮಾ ಇದು. ಆಗಸ್ಟ್ 25 ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. ಪುರಿ ಜಗನ್ನಾಥ್, ಚಾರ್ಮಿ ಕೌರ್ ಮತ್ತು ಕರಣ್ ಜೋಹರ್ ಜಂಟಿಯಾಗಿ ಲಿಗರ್ ಚಿತ್ರವನ್ನು ನಿರ್ಮಿಸಿದ್ದಾರೆ.
ಲಿಗರ್, ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ: ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದ ಬಗ್ಗೆ ಮಾತನಾಡಿದ್ದ ವಿಜಯ್, ಲಿಗರ್ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದರು. ರಿಲೀಸ್ಗೂ ಮುನ್ನವೇ ‘ಬ್ಲಾಕ್ ಬಸ್ಟರ್’ ಎಂದು ಕರೆದಿದ್ದರು. ಅರ್ಜುನ್ ರೆಡ್ಡಿ, ಡಿಯರ್ ಕಾಮ್ರೇಡ್ನಂತಹ ಚಿತ್ರದ ಮೂಲಕ ಜನಪ್ರಿಯತೆ ಪಡೆದಿರುವ ವಿಜಯ್ ದೇವರಕೊಂಡ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.