ಬಿಹಾರದ ಪೊಲೀಸ್ ಮಹಾನಿರ್ದೇಶಕರಾದ ಎಸ್.ಕೆ. ಸಿಂಗಾಲ್ ಸಮಾಜ ಸುಧಾರಣೆ ಅಭಿಯಾನದಲ್ಲಿ ವಿಚಿತ್ರವಾದ ಹೇಳಿಕೆಯನ್ನು ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ. ಪೋಷಕರ ಒಪ್ಪಿಗೆಯಿಲ್ಲದೇ ಮದುವೆಯಾಗುವ ಹೆಣ್ಣು ಮಕ್ಕಳನ್ನು ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆ ದಂಧೆಗೆ ನೂಕಲಾಗುತ್ತದೆ ಎಂದು ಹೇಳಿದ್ದಾರೆ.
ಮನೆ ಬಿಟ್ಟು ಹೋಗುವ ಯುವತಿಯರು ಪೋಷಕರ ಒಪ್ಪಿಗೆಯನ್ನು ಪಡೆಯದೇ ಮದುವೆಯಾಗುವಂತಹ ಅನೇಕ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಇದರಲ್ಲಿ ಅನೇಕ ಯುವತಿಯರನ್ನು ಕೊಲೆ ಮಾಡಲಾಗಿದೆ. ಇನ್ನೂ ಕೆಲವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿದೆ. ಇಂತಹ ನಿರ್ಧಾರಗಳಿಗೆ ಪೋಷಕರು ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಸಮಸ್ತಿಪುರದಲ್ಲಿ ನಡೆದ ಸಮಾಜ ಸುಧಾರಣಾ ಅಭಿಯಾನದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಪೋಷಕರು ತಮ್ಮ ಮಕ್ಕಳೊಂದಿಗೆ ನಿಯಮಿತವಾಗಿ ಮಾತನಾಡಬೇಕೆಂದು ನಾನು ವಿನಂತಿಸುತ್ತೇನೆ. ಅವರಿಗೆ ಉತ್ತಮ ಸಂಸ್ಕಾರಗಳನ್ನು ನೀಡಿ ಹಾಗೂ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ ಎಂದು ಹೇಳಿದರು.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ನಡೆಸುತ್ತಿರುವ ಸಮಾಜ ಸುಧಾರಣಾ ಅಭಿಯಾನದಲ್ಲಿ ಸಿಂಗಾಲ್ ಈ ಹೇಳಿಕೆಗಳನ್ನು ನೀಡಿದ್ದಾರೆ.